ಕಿಕ್ಕೇರಿ: ಶತಮಾನ ಪೂರೈಸಿರುವ ಶಾಲೆಗಳನ್ನು ಉಳಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ. ತಿಮ್ಮೇಗೌಡ ಸಲಹೆ ನೀಡಿದರು.
ಹೋಬಳಿ ಗಡಿಭಾಗ ಮಾದಾಪುರ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 139 ವರ್ಷಗಳಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದ ಶಾಲೆ ಇದಾಗಿದೆ ಎಂಬುದು ಅಚ್ಚರಿ. ಗ್ರಾಮ ಸ್ವಾತಂತ್ರ್ಯಪೂರ್ವದಲ್ಲಿ ವೇದಾಗಮ, ಪಂಡಿತರು ಇರುವ ಗ್ರಾಮವಾಗಿತ್ತು. ಸುಶಿಕ್ಷಿತರು ನೆಲೆಸಿದ್ದ ಗ್ರಾಮದಲ್ಲಿ ಅಂದಿನ ಕಾಲದಲ್ಲಿ ವಿದ್ಯಾರ್ಜನೆಗಾಗಿ ಶಾಲೆ ತೆರೆದಿರುವುದು ದೊಡ್ಡ ಸಾಧನೆ. ಶಾಲೆ ಅರಂಭಕ್ಕೆ ಕಾರಣಕರ್ತರಾದ ಮಹನೀಯರನ್ನು ಸ್ಮರಿಸಬೇಕಿದೆ ಎಂದು ಹೇಳಿದರು.
ಇಂಥ ಬಲುದೀರ್ಘ ಇತಿಹಾಸದ ಶಾಲೆಗೆ ಇಂದು ಮಕ್ಕಳ ದಾಖಲಾತಿ ಕೊರತೆ ಕಾಡುತ್ತಿದೆ ಎಂಬುದು ಬೇಸರ. ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ದೊಡ್ಡ ಅಧಿಕಾರಿಗಳಾಗಿ ದೂರದ ನಗರ, ಪ್ರದೇಶದಲ್ಲಿ ನೆಲೆಸಿದ್ದಾರೆ. ಇವರನ್ನು ಕಲೆಹಾಕಿ ಗೌರವಿಸಿ ಶಾಲೆ ಅಭಿವೃದ್ಧಿಗೆ ಮುಂದಾಗಲು ಗ್ರಾಮಸ್ಥರ ಸಹಕಾರ ಅವಶ್ಯವಿದೆ ಎಂದು ಮನವಿ ಮಾಡಿದರು.
ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಶಾಲೆ ಹಬ್ಬವಾದ ವಾರ್ಷಿಕೋತ್ಸವವನ್ನು ಗ್ರಾಮದ ದೊಡ್ಡಹಬ್ಬದಂತೆ ಆಚರಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಗ್ರಾಮದಲ್ಲಿ ತಳಿರು ತೋರಣ, ವಿದ್ಯುತ್‌ದೀಪಗಳ ಅಲಂಕಾರ ಗ್ರಾಮದ ಶಾಲೆ ಮೇಲಿರುವ ಪ್ರೀತಿ ತೋರಿಸುವಂತಿದೆ. ಶಾಲೆ ಮುಚ್ಚಲು ಅವಕಾಶ ನೀಡದೆ ಹೆಚ್ಚು ಮಕ್ಕಳನ್ನು ಶಾಲೆಗೆ ಸೇರಿಸಲು ಮುಂದಾಗಿ. ಖಾಸಗಿ ಶಾಲೆ ವ್ಯಾಮೋಹ ಬಿಡಿ ಎಂದು ವಿನಂತಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಯೋಗೇಶ್ ಮಾತನಾಡಿ, ಶಾಲೆ ಕಟ್ಟಡ ಹಳೆಯದಾಗಿದೆ. ಮಕ್ಕಳ ಮನೆ ಆರಂಭಿಸಲಾಗಿದೆ. ನೂತನ ಕಟ್ಟಡ, ಕಾಂಪೌಂಡ್ ನಿರ್ಮಿಸಿಕೊಡಿ ಎಂದು ಅಧಿಕಾರಿಗಳಲ್ಲಿ ಒತ್ತಾಯಿಸಿದರು. ಸಮಾರಂಭಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು. ಬಲುದೀರ್ಘಾವಧಿ ಸೇವೆ ಸಲ್ಲಿಸಿ ವರ್ಗಾವಣೆವಾದ ಶಿಕ್ಷಕ ರಾಜಪ್ಪ ಅವರನ್ನು ಸನ್ಮಾನಿಸಲಾಯಿತು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ(ಸಿಆರ್‌ಪಿ) ಆಶಾರಾಣಿ, ಮಾದಾಪುರ ಗ್ರಾಪಂ. ಅಧ್ಯಕ್ಷ ಕುಮಾರ್, ಮನ್ಮುಲ್ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ, ಡೇರಿ ಅಧ್ಯಕ್ಷ ಶಂಕರೇಗೌಡ, ಮುಖಂಡ ರಾಮಕೃಷ್ಣೇಗೌಡ, ಮಂಜೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಯೋಗೇಶ್, ಶಿಕ್ಷಕ ಶ್ರೀನಿವಾಸ್, ಜ್ಯೋತಿ, ಕೋದಂಡರಾಮ್, ಕಾಂತರಾಜು, ಕುಮಾರಸ್ವಾಮಿ, ಎಸ್‌ಡಿಎಂಸಿ ಸದಸ್ಯ ಸೋಮಶೇಖರ್, ಮೋಹನಕುಮಾರ್, ನವೀನ್ ಇತರರು ಇದ್ದರು.