ರೋಣ: ನಮ್ಮ ಪೂರ್ವಜರಿಂದ ಬಳವಳಿಯಾಗಿ ಬಂದಿರುವ ಮೂಲ ಜನಪದ ಕಲೆಗೆ ಧಕ್ಕೆಯಾಗದಂತೆ ಉಳಿಸಿ, ಬೆಳೆಸಲು ಜನಪದ ಕಲೆ ಮತ್ತು ಕಲಾವಿದರಿಗೆ ಉತ್ತೇಜನ ನೀಡುವುದು ಅತ್ಯಗತ್ಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಜನಪದ ಕಲಾವಿದ ಶಂಕ್ರಣ್ಣ ಸಂಕಣ್ಣವರ ಹೇಳಿದರು.
ತಾಲೂಕಿನ ಅರಹುಣಸಿ ಗ್ರಾಮದ ಸಮಾಜ ಮಂದಿರದ ಆವರಣದಲ್ಲಿ ಗ್ರಾಮದೇವತೆ ದೇವಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಗುದ್ನೇಶ್ವರ ಟ್ರಸ್ಟ್ ಕಮಿಟಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಜನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಪೂರ್ವಜರು ನೀಡಿದ ಜನಪದ ಕಲೆ ಮತ್ತು ಸಾಹಿತ್ಯ ಉಳಿಯಬೇಕು. ಜನಪದದ ಕಂಪು ಎಲ್ಲೆಡೆ ವಿಸ್ತರಿಸಬೇಕು. ಪೂರ್ವಜರು ಏನೇ ಮಾಡಿದರು ಅದಕ್ಕೊಂದು ಅರ್ಥ, ಸಂದೇಶ ಮತ್ತು ವೈಶಿಷ್ಟ್ಯತೆ ಅಡಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ನನ್ನಯ್ಯಸ್ವಾಮಿ ಹಿರೇಮಠ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಅಳಿವಿನಂಚಿನಲ್ಲಿರುವ ಗೀಗೀ ಪದ, ಲಾವಣಿ ಪದ, ಸುಗ್ಗಿ ಪದ, ಲಾಲಿ ಹಾಡು, ಬೀಸುವ ಪದಗಳ ಇಂದು ಅಪರೂಪವಾಗಿವೆ ಎಂದರು.
ಹಿರೇಮಣ್ಣೂರ ಶ್ರೀ ಗಜಾನನ ಕಲಾತಂಡದ ಕಲಾವಿದರರಾದ ನಿಂಗಪ್ಪ ಕಾಶಪ್ಪನವರ, ಪವಿತ್ರಾ ಜಕ್ಕಮ್ಮನವರ, ಸಂಗೀತಾ ಗದಗ, ಸಂಕ್ರಪ್ಪ ಹುಲ್ಲೂರ, ಸೋಮನಗೌಡ ಕುರಿಯವರ ತಂಡದ ಜೋಗತಿ ನೃತ್ಯ, ಲಾವಣಿ, ಗೀಗೀ ಪದ, ಕಾಡು ಜನರ ನೃತ್ಯ ಗಮನ ಸೆಳೆಯಿತು. ಗ್ರಾಪಂ ಉಪಾಧ್ಯಕ್ಷೆ ಉಮಾ ಅಣ್ಣಿಗೇರಿ, ಸದಸ್ಯ ನಾಗರಾಜ ಗುದ್ನೆಪ್ಪನವರ, ಶಿವಗಂಗಾ ಹಿಂದಿನಮನಿ, ತಿಮ್ಮಣ್ಣ ಚಿಕ್ಕರಡ್ಡಿ, ಚಿದಂಬರಗೌಡ ಸುಳ್ಳದ, ನಾಟಕ ರಚನೆಕಾರ ಭೀಮಪ್ಪ ದುಗಲದ, ಗಜಾನನ ಕಲಾ ತಂಡದ ಅಧ್ಯಕ್ಷ ಶಿವಪುತ್ರಪ್ಪ ಚಿಕ್ಕನರಗುಂದ ಇತರರಿದ್ದರು. ನಾಗರಾಜ ಚಿಕ್ಕರಡ್ಡಿ ಸ್ವಾಗತಿಸಿದರು. ವೀರೇಂದ್ರಗೌಡ ಪಾಟೀಲ ನಿರೂಪಿಸಿದರು.