ಜಿಲ್ಲೆ

ಜಾನಪದ ಕಲೆ ಉಳಿಸಿ, ಬೆಳೆಸಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಜಾನಪದ ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿದೆ. ಜಾನಪದ ಕಲೆಯನ್ನು ಬೆಳಸಿ, ಉಳಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಇಲ್ಲಿನ ಜಯಚಾಮರಾಜ ನಗರದ ಅಕ್ಕನ ಬಳಗದಲ್ಲಿ ಜನಪದರು , ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಶನಿವಾರ ಏರ್ಪಡಿಸಿದ್ದ ಮೂಲ ಜನಪದ ಹಾಡು, ಹಾಡುಗಾರಿಕೆ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಾನಪದ ಕಲೆ ನಶಿಸಿ ಹೋಗುತ್ತಿರುವ ಈ ದಿನಗಳಲ್ಲಿ ಕಳೆದ ಒಂದು ವಾರದಿಂದ ಅಕ್ಕನ ಬಳಗದಲ್ಲಿ ಅತ್ಯುತ್ತಮ ಕಾರ್ಯಕ್ರಮ ನಡೆಸಿರುವುದು ಹಾಗೂ ವಿಶೇಷವಾಗಿ ಮಹಿಳೆಯರನ್ನು ಸೇರಿಸಿ ಕಾರ್ಯಕ್ರಮ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಲ್ಲ ಹಬ್ಬಗಳು ಮಹಿಳೆಯರಿಗೆ ಇರುವ ಹಿನ್ನೆಲೆಯಲ್ಲಿ ಜಗ್ಗಲಗಿ ಹಬ್ಬ ಆರಂಭ ಮಾಡಲಾಗಿದ್ದು, ಇಂದು ಜಗ್ಗಲಗಿ ಹಬ್ಬ ಜಾನಪದ ಕಲೆ ಉಳಿಸಲು ಸಹಕಾರಿಯಾಗಿದೆ ಎಂದರು.

ಜಾನಪದ ಸಿರಿ ಪ್ರಶಸ್ತಿ ಪುರಸ್ಕೃತ ಕಲಾವಿದ ಡಾ. ಅಪ್ಪಗೆರಿ ತಿಮ್ಮರಾಜು ಮಾತನಾಡಿ, ಜಾನಪದ ಕಲೆಗಳು ಉಳಿದರೆ ಮಾತ್ರ ದೇಶ ಜೀವಂತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೂಲ ಜಾನಪದ ಕಲೆಯನ್ನು ನಾವೆಲ್ಲರೂ ಹೆಚ್ಚು ಹೆಚ್ಚು ಬಳಸೋಣ ಎಂದರು. ಹಿರಿಯ ಜಾನಪದ ಕಲಾವಿದ ಡಾ. ರಾಮು ಮೂಲಗಿ ಮಾತನಾಡಿದರು.

ಮೇಯರ್ ವೀಣಾ ಬರದ್ವಾಡ, ಅಕ್ಕನ ಬಳಗದ ಅಧ್ಯಕ್ಷೆ ಗೀತಕ್ಕ ಮುಳ್ಳಳ್ಳಿ, ಗದಗಯ್ಯ ಹಿರೇಮಠ, ಸಂದ್ಯಾ ದೀಕ್ಷಿತ, ಪದ್ಮಜಾ ಉಮರ್ಜಿ ಹಾಗೂ ಇತರ ಕಲಾವಿದರು ಉಪಸ್ಥಿತರಿದ್ದರು.