ಬಸವನಬಾಗೇವಾಡಿ: ಭಾರತದ ಮೂಲ ಸಂಸ್ಕೃತಿಯಾಗಿರುವ ಜಾನಪದ ಕಲೆ ಮತ್ತು ಸಂಸ್ಕೃತಿ ನಮ್ಮ ದೇಶದ ಶ್ರೇಷ್ಠ ಸಂಸ್ಕೃತಿಯಾಗಿದೆ. ಇಂತಹ ಜಾನಪದ ಕಲೆ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಜವಳಿ ಕಬ್ಬು ಅಭಿವೃದ್ಧಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಘಟಕ ಹಾಗೂ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲೂಕು ಘಟಕ ಹಾಗೂ ಪಡಗಾನೂರಿನ ಮಾತ್ರೋಶ್ರೀ ಸುಮಂಗಲಾಬಾಯಿಗೌತಿ ಪಾಟೀಲ ಜಾನಪದ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆಗಳು ಮೊಬೈಲ್, ಟಿವಿ, ಇಂಟರ್‌ನೆಟ್, ಸಾಮಾಜಿಕ ಜಾಲತಾಣದ ಅಬ್ಬರದಲ್ಲಿ ನಮ್ಮ ಮೂಲ ಸಂಸ್ಕೃತಿಯಾಗಿರುವ ಜಾನಪದ ಕಲೆಯನ್ನು ಮರೆಯುತ್ತಿದ್ದಾರೆ. ಅದನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರ ಮೇಲಿದೆ ಎಂದರು.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಸಾವಿರಾರು ಜಾನಪದ ಕಲಾವಿರಿದ್ದಾರೆ. ಕೆಲವರಿಗೆ ಸರ್ಕಾರದಿಂದ ಮಾಸಾಶನ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಜಾನಪದ ಸಂಶೋಧನಾ ಕೇಂದ್ರ ಸ್ಥಾಪನೆಯಾಗಬೇಕು. ಈ ಭಾಗದ ಜಾನಪದ ಕಲಾವಿದರಿಗೂ ಸರ್ಕಾರದ ಸೌಲಭ್ಯಗಳನ್ನು ಸಚಿವರು ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಜಾನಪದ ಪರಿಷತ್ ತಾಲೂಕಾಧ್ಯಕ್ಷ ದೇವೆಂದ್ರ ಗೊನ್ಯಾಳ, ನಿಡಗುಂದಿ ತಾಲೂಕಾಧ್ಯಕ್ಷ ವೈ.ಎಸ್. ಗಂಗನಶೆಟ್ಟಿ, ಕೊಲ್ಹಾರ ತಾಲೂಕಾಧ್ಯಕ್ಷ ಮಲ್ಲಪ್ಪ ಗಣಿ, ಜಿಲ್ಲಾ ಸಂಚಾಲಕ ಪ್ರೊ. ಜಿ.ಎಂ. ಹಳ್ಳೂರ, ಪದಾಧಿಕಾರಿಗಳಾದ ಕಾಶಿನಾಥ ಅವಟಿ, ಬಸವರಾಜ ಹಾರಿವಾಳ, ಬಸಪ್ಪ ಕುಂಬಾರ, ಭೀಮಶಿ ಬೀಳಗಿ ಇತರರಿದ್ದರು.