ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕುಂದಗೋಳದ ಸಂಗೀತ ಸಾಮ್ರಾಟ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಗುರುವರ್ಯ ಸವಾಯಿ ಗಂಧರ್ವರ 72ನೇ ಪುಣ್ಯತಿಥಿ ಅಂಗವಾಗಿ ಸೆ. 26ರಿಂದ ಎರಡು ದಿನಗಳ ಕಾಲ ಸಂಗೀತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ಚೇರ್ಮನ್ ಅರವಿಂದ ಕಟಗಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಸವಾಯಿ ಗಂಧರ್ವರ ರಾಷ್ಟ್ರೀಯ ಸಂಗೀತ ಪುರಸ್ಕಾರ ಪ್ರದಾನ ನಡೆಯಲಿದೆ. ಎರಡು ದಿನ ಅಹೋರಾತ್ರಿ ಸಂಗೀತ ಕಛೇರಿ ಜರುಗಲಿದೆ ಎಂದರು.
ಸೆ. 26ರಂದು ಬೆಳಗ್ಗೆ 10ಕ್ಕೆ ಸಂಗೀತೋತ್ಸವವನ್ನು ರಾಜ್ಯಸಭಾ ಸದಸ್ಯೆ ಹಾಗೂ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಉದ್ಘಾಟಿಸುವರು. ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರು ಭಾರತ ರತ್ನ ಭೀಮಸೇನ್ ಜೋಶಿ ಪುತ್ರ ಪಂ. ಶ್ರೀನಿವಾಸ ಜೋಶಿ ಅವರಿಗೆ ರಾಷ್ಟ್ರೀಯ ಸಂಗೀತ ಪುರಸ್ಕಾರ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಎಂ.ಆರ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಕುಮಾರ ಬೆಕ್ಕೇರಿ, ವಿಕ್ರಮ ಶಿರೂರ ಹಾಗೂ ಸಂಗೀತಗಾರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಧಾರವಾಡ, ಪುಣೆ, ಬೆಂಗಳೂರು, ಗ್ವಾಲಿಯರ್, ಜಮ್ಮು, ಜಾರ್ಖಂಡ್, ಮುಂಬೈ, ಗೋವಾ ಸೇರಿ ವಿವಿಧ ಕಡೆಗಳಿಂದ ಕಲಾವಿರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಅನುದಾನ ಅಗತ್ಯ: ಸಂಗೀತ ಮಹೋತ್ಸವಕ್ಕೆ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯವರು 4 ಲಕ್ಷ ರೂ. ನೀಡುತ್ತಿದ್ದು, ಸಮಾಜದ ಗಣ್ಯರು, ಸಂಗೀತ ಪ್ರೇಮಿಗಳು ಹಣಕಾಸಿನ ಸಹಾಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಎಂದು ಕಟಗಿ ಅವರು ಆಗ್ರಹಿಸಿದರು.
ದಿ. ಗಂಗೂಬಾಯಿ ಹಾನಗಲ್ಲ ಅವರ ಮನೆ ಹಾಗೂ ಹುಬ್ಬಳ್ಳಿಯ ಗುರುಕುಲ ಸೇರಿ ಅವರ ಹೆಸರು ಉಳಿಸುವಂತಹ ಸ್ಮಾರಕಗಳನ್ನು ಉಳಿಸಿಕೊಳ್ಳಲು ಸಂಸ್ಥೆಯು ತನ್ನದೇ ಹೋರಾಟ ಮಾಡಲಿದೆ ಎಂದು ಅವರು ಪ್ರತಿಕ್ರಿಯಿಸಿದರು.