ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ ಮಾಡಿ ಎಂದು ಬಿಜೆಪಿ ಕರೆ ಕೊಟ್ಟಿಲ್ಲ. ಸಾವರ್ಕರ್ ವಿಚಾರದಲ್ಲಿ ಅವರ ಹೇಳಿಕೆಗಳಿಂದ ಜನರ ಮನಸ್ಸಿಗೆ ನೋವಾಗಿದೆ. ಭಾವನೆಗಳು ಸ್ಫೋಟಗೊಂಡಾಗ ಪ್ರತಿಭಟನೆ ಸಹಜ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು.
ಶುಕ್ರವಾರ ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲು ಯುವ ಸಮುದಾಯ ಸಿದ್ಧವಿಲ್ಲ. ಅವರಿಗೆ ಹಣೆ ಮೇಲೆ ಕುಂಕುಮ ಇಟ್ಟವರು ಹಾಗೂ ಸಾವರ್ಕರ್ ಫೋಟೋ ಕಂಡರೆ ಆಗಲ್ಲ. ನಡವಳಿಕೆ, ಹೇಳಿಕೆ, ಆಡಳಿತದಲ್ಲಿ ಪ್ರತ್ಯೇಕತೆಯ ಭಾವನೆ ತೋರಿಸುತ್ತಾರೆ. ಇದನ್ನು ಕರ್ನಾಟಕದ ಜನ ಸಹಿಸುವುದಿಲ್ಲ. ಹೇಳಿಕೆ ಕೊಡುವವರಿಗೆ ಪ್ರತಿಭಟನೆಯನ್ನು ಸಹಿಸುವ ಶಕ್ತಿಯೂ ಇರಬೇಕು. ಏನು ಬೇಕಾದರೂ ಹೇಳಿಕೆ ಕೊಟ್ಟು ಜೀರ್ಣ ಮಾಡಿಕೊಳ್ಳುತ್ತೇನೆ ಎನ್ನುವ ಕಾಲ ಹೊರಟು ಹೋಗಿದೆ ಎಂದರು.
ಹೋರಾಟದ ಕಾರಣಕ್ಕೆ ವೀರ ಸಾವರ್ಕರ್ ಆಗಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಅಂದರೆ ಇತಿಹಾಸದ ಬಗ್ಗೆ ಅರ್ಧಂಬರ್ಧ ತಿಳಿದುಕೊಂಡಿದ್ದಾರೆ ಎಂದರ್ಥ. ಸಿದ್ದರಾಮಯ್ಯ ಅವರು ಅಂಡಮಾನಿನ ಸೆಲ್ಯೂಲರ್ ಜೈಲು ನೋಡಿಕೊಂಡು ಬರಬೇಕು. ಜೈಲನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಅವರು ನಡೆಸಿದ ಹೋರಾಟ ಮತ್ತು ಬ್ರಿಟಿಷರ ಕ್ರೂರತೆ ಯಾವ ರೀತಿ ಇತ್ತು ಅನ್ನೋದು ಗೊತ್ತಾಗುತ್ತೆ. ಸಾವರ್ಕರ್ ಈ ದೇಶದ ರಾಷ್ಟ್ರೀಯತೆಯ ಪ್ರತೀಕ, ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಮೆರವಣಿಗೆಗಳು, ಕಾರ್ಯಕ್ರಮಗಳು, ಬ್ಯಾನರ್‌ಗಳು, ಪುತ್ಥಳಿಗಳು ಮುಂದಿನ ದಿನಗಳಲ್ಲಿ ವ್ಯಾಪಕವಾಗಲಿದೆ. ಸಾವರ್ಕರ್ ಹೆಸರು ಮುನ್ನಲೆಗೆ ಬರಲು ಸಿದ್ದರಾಮಯ್ಯನವರೇ ಕಾರಣರಾಗಿದ್ದಾರೆ ಎಂದರು.
ದೇಶದ ಸಂಪ್ರದಾಯ ಮತ್ತು ಪರಂಪರೆಯನ್ನು ನಾವು ಉಳಿಸಿಕೊಳ್ಳುತ್ತೇವೆ. ಅನಗತ್ಯವಾಗಿ ವಿವಾದ ಮಾಡಬಾರದು. ಸರ್ಕಾರಿ ಶಾಲೆಗಳಲ್ಲಿ ಸಹಜವಾಗಿಯೇ ಸಾರ್ವಜನಿಕ ಗಣೇಶ ಉತ್ಸವ ನಡೆಯುತ್ತದೆ. ಶಾಲೆಯ ಆಟದ ಮೈದಾನದಲ್ಲಿ ಗಣೇಶೋತ್ಸವ ನಡೆಯುತ್ತದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ ಸರ್ಕಾರ ಸಹಿಸಿಕೊಳ್ಳುವುದಿಲ್ಲ ಎಂದರು.