ಬೆಂಗಳೂರು: ಸಾವರ್ಕರ್ ವಿಚಾರವಾಗಿ ಬ್ರಿಟಿಷರ ದೃಷ್ಟಿಕೋನದಲ್ಲಿ ಚರಿತ್ರೆ ಓದಿದರೆ 'ಕ್ಷಮೆಯ ಚರಿತ್ರೆ' ಮಾತ್ರ ಓದಲು ಸಾಧ್ಯ. ಹಿಂದುಗಳ ದೃಷ್ಟಿಕೋನದಲ್ಲಿ ಓದಿದಾಗ ಸ್ವಾತಂತ್ರ್ಯದ ಭಾವ ಅರ್ಥವಾಗುತ್ತದೆ ಎಂದು ರಂಗಕರ್ಮಿ ಎಸ್.ಎನ್. ಸೇತುರಾಂ ಹೇಳಿದ್ದಾರೆ.
ಸಾವರ್ಕರ್ ಸಾಹಿತ್ಯ ಸಂದ ವತಿಯಿಂದ ನೃಪತುಂಗ ರಸ್ತೆಯ ದಿ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 'ಸಾವರ್ಕರ್ ಸಮಗ್ರ ಸಂಪುಟ-1' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
'ಶಾಂತಿಯುತವಾಗಿ ಸ್ವಾತಂತ್ರ ಲಭಿಸಿತು, ಸಾವು&ನೋವುಗಳಿರಲಿಲ್ಲ' ಎಂದು ನಂಬಿದ್ದ ಸತ್ಯಗಳು ಸಾವರ್ಕರ್ ಪುಸ್ತಕದಿಂದ ಸುಳ್ಳು ಎಂಬುದು ತಿಳಿಯುತ್ತದೆ. ಶಸ್ತ್ರವಿಲ್ಲದೆ ಸ್ವಾತಂತ್ರ್ಯ ಸಿಗುವುದಿಲ್ಲ ಎಂಬುದನ್ನು ಸಾವರ್ಕರ್ ಸ್ಪಷ್ಟವಾಗಿ ಮನಗಂಡಿದ್ದರು. ಕೊನೆಗೂ ಶಸ್ತ್ರದ ಹೆದರಿಕೆಯಿಂದಲೇ ಸ್ವಾತಂತ್ರ ಸಿಕ್ಕಿರುವುದು ವಾಸ್ತವ. ಆದರೆ ಶಾಂತಿ ಮಂತ್ರದಿಂದ ಸ್ವಾತಂತ್ರ ಸಿಕ್ಕಿದೆ ಎಂದು ಪಠ್ಯಗಳಲ್ಲಿ ಬೋಧಿಸಲಾಗಿದೆ ಎಂದರು.
ಸಮಾಜದಲ್ಲಿ ಇಂದಿಗೂ ಬಂಡತನ ಹಾಗೂ ಲೂಟಿ ಮುಂದುವರಿದಿದೆ. ನಾವ್ಯಾಕೆ ಅದನ್ನು ಸಹಿಸಿಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕಾದಾಗ 'ಸಾವರ್ಕರ್ ಆತ್ಮಚರಿತ್ರೆ' ಪ್ರಸ್ತುತವಾಗುತ್ತದೆ. ಅಧಿಕಾರದಲ್ಲಿದ್ದು ಸುಳ್ಳು ಹೇಳುವುದು, ಲೂಟಿ ಮಾಡುವುದು, ಆಡಳಿತ ವ್ಯವಸ್ಥೆಯಲ್ಲಿರುವ ಭಂಡತನ ಬ್ರಿಟಿಷರಿಂದ ಬಂದ ಬಳುವಳಿಯಾಗಿದೆ. 'ಕಳ್ಳತನ' ಬ್ರಿಟಿಷರ ಸಂಸತಿಯಾಗಿದ್ದು, ಇಂದಿಗೂ ಅವರ ಆರ್ಥಿಕತೆ 'ಲೂಟಿ' ಮೇಲೆ ನಿಂತಿದೆ. ಈ ದೇಶದಲ್ಲಿ ಯಾರಾದರೂ ದುಡ್ಡು ಕೊಳ್ಳೆ ಹೊಡೆದರೆ, ಅದನ್ನು ಇಂಗ್ಲೆಂಡ್ಗೆ ಸಾಗಿಸಬಹುದು. ಸಮಸ್ಯೆ ಬಂದರೆ ಅದನ್ನು ಕಾಯಲೂ ಸಿದ್ಧರಿದ್ದಾರೆ. ಬೇರೆ ರಾಷ್ಟ್ರದ ಜೇಬು ಕತ್ತರಿಸಿ ಬ್ರಿಟಿಷ್ ದೇಶಗಳು ಜೀವನ ನಡೆಸುತ್ತಿವೆ ಎಂದು ವಿವರಿಸಿದರು.
ಹೊಲಸು ಬದುಕನ್ನು ಬದುಕಿ, ಭಂಡತನದಿಂದ ಅದರ ಬಗ್ಗೆ ಬರೆದುಕೊಂಡು ಪ್ರಕಟಿಸುವುದೇ ಇತ್ತೀಚೆಗೆ ಅದ್ಭುತ ಆತ್ಮಚರಿತ್ರೆ ಎಂದಾಗಿದೆ. ಈ ರೀತಿ ಬರೆದುಕೊಂಡವರು ಸಮಾಜದಲ್ಲಿ ಯಾವ ವಿಚಾರಕ್ಕೆ ಉದಾಹರಣೆಯಾಗುತ್ತೀರಿ? ಹೊಲಸುತನದೊಂದಿಗೆ ಬದುಕಿದ್ದರೆ ದಯವಿಟ್ಟು ಆತ್ಮಚರಿತ್ರೆ ಬರೆದುಕೊಳ್ಳಬೇಡಿ. -ಎಸ್.ಎನ್. ಸೇತುರಾಂ, ಹಿರಿಯ ರಂಗಕರ್ಮಿ
ಕೆಲ ನಾಯಕರು ತಮ್ಮ ಜೀವನದ ಯಾವ ಕಾಲಟ್ಟದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಹುಟ್ಟಿನಿಂದಲೇ ತೊಡಗಿಸಿಕೊಂಡರಾ ಅಥವಾ ಚೆನ್ನಾಗಿ ದುಡಿದು, ಹೆಂಡತಿ&ಮಕ್ಕಳನ್ನು ಸಲುಹಿದ ನಂತರ ಹೋರಾಟದಲ್ಲಿ ಪಾಲ್ಗೊಂಡರಾ ಎಂಬ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. 50ನೇ ವರ್ಷದ ವಯಸ್ಸಿನವರೆಗೆ ಗಾಂಧೀಜಿ ಸ್ವಾತಂತ್ರ್ಯ ಹೋರಾಟಕ್ಕೆ ಬಂದಿರಲಿಲ್ಲ ಎಂಬುದು ವಾಸ್ತವ. ಕೆಲ ನಾಯಕರು ಭೌತಿಕ ವ್ಯವಸ್ಥೆಗಳನ್ನು ಸಂಪಾದಿಸಿದ ಬಳಿಕ ಹೋರಾಟಕ್ಕೆ ಧುಮುಕಿದರು. ಆದರೆ ಸಾವರ್ಕರ್, ಭಗತ್ ಸಿಂಗ್, ಖುದಿರಾಮ್ ಬೋಸ್ ಮುಂತಾದವರು ಮೀನ-ಮೇಷ ಎಣಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಬಂದವರಲ್ಲ. "ಲೆಕ್ಕಾಚಾರ ಮಾಡಿದ ಹಾಗೂ ಲೆಕ್ಕಾಚಾರ ಮಾಡದ' ಹೋರಾಟಗಾರರ ಬಗ್ಗೆ ಇತಿಹಾಸದಲ್ಲಿ ದಾಖಲಾಗಿದೆ ಎಂದು ಇತಿಹಾಸಕಾರ ಡಾ.ಜಿ.ಬಿ. ಹರೀಶ್ ಹೇಳಿದರು.
ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್, ಮಾಜಿ ಎಂಎಲ್ಸಿ ಡಾ.ಎಸ್.ಆರ್. ಲೀಲಾ ಉಪಸ್ಥಿತರಿದ್ದರು.