ಜಿಲ್ಲೆ

ಸಾವರ್ಕರ್ ಸ್ಮತಿ ದಿನ : ಮೈಸೂರಿನಲ್ಲಿ ಪಂಜಿನ ಮೆರವಣಿಗೆ

ಸದೇಶ್ ಕಾರ್ಮಾಡ್

ಮೈಸೂರು: ಸಾವರ್ಕರ್ ಪ್ರತಿಷ್ಠಾನ ವತಿಯಿಂದ ಸ್ವಾತಂತ್ರೃ ಹೋರಾಟಗಾರ ವೀರ ಸಾವರ್ಕರ್ ಅವರ 59ನೇ ಸ್ಮತಿ ದಿನದ ಅಂಗವಾಗಿ ಬುಧವಾರ ಪಂಜಿನ ಮೆರವಣಿಗೆ ಆಯೋಜಿಸಲಾಗಿತ್ತು.

ನಗರದ ಗನ್‌ಹೌಸ್ ವೃತ್ತದಲ್ಲಿ ಆರಂಭವಾದ ಮೆರವಣಿಗೆ ಚಾಮರಾಜ ಜೋಡಿ ರಸ್ತೆ ಮೂಲಕ ಸಾಗಿ ನಾರಾಯಣ ಶಾಸ್ತ್ರಿ ರಸ್ತೆಯ ಸ್ವಾತಂತ್ರ್ಯ ಹೋರಾಟಗಾರರ ಮೈದಾನದ ಬಳಿ ಅಂತ್ಯಗೊಂಡಿತು. ಮೆರವಣಿಗೆಯುದ್ದಕ್ಕೂ ಸಾವರ್ಕರ್‌ಗೆ ಜೈಕಾರ ಹಾಕಲಾಯಿತು.

ಸಾಮಾಜಿಕ ಕಾರ್ಯಕರ್ತ ರಾಕೇಶ್ ಭಟ್ ಮಾತನಾಡಿ, ಇಂದು ಭಾಷೆಗಳ ನಡುವೆ ಕಿಚ್ಚು ಹಚ್ಚಿ ರಾಜಕೀಯ ಬೆಂಕಿ ಹಚ್ಚುತ್ತಿದ್ದಾರೆ, ಮತ್ತೊಂದು ಕಡೆ ಮತದ ಹೆಸರಿನಲ್ಲಿ ಪೊಲೀಸರ ಮೇಲೆ ಹಲ್ಲೆಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸಾವರ್ಕರ್ ಹೇಳಿದಂತೆ ಸಾಂಸ್ಕೃತಿಕವಾಗಿ ಹಿಂದುತ್ವದಡಿ ಒಂದಾಗಿ ದೇಶ ಮುನ್ನಡೆಯಬೇಕು. ಶಿವರಾತ್ರಿಯ ಸಂದರ್ಭ ಮೇಲು ಕೀಳುಗಳನ್ನು ಬಿಟ್ಟು ಸಾವರ್ಕರ್ ಸಾರ್ವ ಜನರಿಗಾಗಿ ಕಟ್ಟಿಸಿದ ಪತಿತ ಪಾವನ ಮಂದಿರವನ್ನು ನೆನೆಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾವರ್ಕರ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಯಶಸ್ವಿನಿ, ಪ್ರಮುಖರಾದ ಡಾ ಚಂದ್ರಶೇಖರ್, ಸಂದೇಶ್, ಶಿವಕುಮಾರ್, ಸಂಜಯ್, ಚೇತನ್ ಗೌಡ, ವಿಕ್ರಂ ಅಯ್ಯಂಗಾರ್, ನಿಶಾಂತ್, ಶ್ರೀನಿವಾಸ್ ಪ್ರಸಾದ್, ಪ್ರತಾಪ್ ಹಾಗೂ ಇತರರು ಪಾಲ್ಗೊಂಡಿದ್ದರು.