ಬೆಂಗಳೂರು: ಸಾವರ್ಕರ್ ಸಾಹಿತ್ಯ ಸಂಘವು ಭಾನುವಾರ (ಮೇ 26) ಬೆಳಗ್ಗೆ 11ಕ್ಕೆ ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿಯಲ್ಲಿ ‘ಸಾವರ್ಕರ್ ಸಮಗ್ರ ಸಂಪುಟ-1’ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಿದೆ.
ಡಾ. ಜಿ. ಬಿ. ಹರೀಶ್ ಪ್ರಧಾನ ಸಂಪಾದಕತ್ವದಲ್ಲಿ ಒಟ್ಟು 10 ಸಂಪುಟಗಳಲ್ಲಿ ಸಾವರ್ಕರ್ ಕುರಿತಾದ ಸಮಗ್ರ ವಿಚಾರಗಳನ್ನು ಹೊರತರುವ ಯೋಜನೆಯನ್ನು ಸಂಘ ಹೊಂದಿದೆ. ಸಂಪಾದಕೀಯ ಮಂಡಳಿಯಲ್ಲಿ ಡಾ. ಎಸ್.ಆರ್. ಲೀಲಾ, ರೋಹಿತ್ ಚಕ್ರತೀರ್ಥ, ಹರ್ಷ ಸಮೃದ್ಧ, ರಮೇಶ ದೊಡ್ಡಪುರ ಇದ್ದಾರೆ. 6ನೇ ಸಂಪುಟವು 2023ರಲ್ಲಿ ಲೋಕಾರ್ಪಣೆಗೊಂಡು ಜನಮನ್ನಣೆ ಗಳಿಸಿದೆ. ಇದೀಗ 1ನೇ ಸಮಗ್ರ ಸಂಪುಟವು ಬಿಡುಗಡೆಗೆ ಸಿದ್ಧವಾಗಿದೆ.ರಂಗಕರ್ಮಿ ಎಸ್.ಎನ್. ಸೇತುರಾಂ, ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್ ಮುಖ್ಯ ಅತಿಥಿಗಳಾಗಿರುವರು.
ಕೃತಿ ಕುರಿತು:
900ಕ್ಕೂ ಹೆಚ್ಚು ಪುಟಗಳು ಇರುವ ಈ ಸಂಪುಟವನ್ನು ಜಾರ್ಖಂಡ್‌ನಲ್ಲಿ ಪ್ರಾಧ್ಯಾಪಕರಾಗಿರುವ ನಾಗ ಎಚ್. ಹುಬ್ಳಿ ಅನುವಾದಿಸಿದ್ದಾರೆ. ಸಾವರ್ಕರ್ ಬಾಲ್ಯ, ಅವರ ಹುಟ್ಟೂರಾದ ಭಾಗುರ್, ನಾಸಿಕ್‌ನಲ್ಲಿ ಕಳೆದ ಸಮಯ, ಲಂಡನ್ ದಿನಗಳು ಮತ್ತಿತರ ವಿವರ ಒಳಗೊಂಡಿದೆ. ತಮ್ಮ ಕುಟುಂಬ, ಬಾಲ್ಯ ಮತ್ತು ತಾರುಣ್ಯದ ಅನೇಕ ರೋಚಕ ಕಥೆಗಳನ್ನು ಸಾವರ್ಕರ್ ಅವರೇ ಬರೆದಿದ್ದಾರೆ. ಶತ್ರುಗಳ ನೆಲೆಯಲ್ಲಿಯೇ ನಿಂತು ಸಾವರ್ಕರ್ ಯಾವ್ಯಾವ ಚಟುವಟಿಕೆ ನಡೆಸಿದರೆಂಬುದರ ವಿಸ್ತೃತ ಮಾಹಿತಿ ಈ ಸಂಪುಟದಲ್ಲಿದೆ. ಕಾರ್ಯಕ್ರಮದಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ.