ಜಿಲ್ಲೆ

ದಿ. ಶೀಂಟೂರು ನಾರಾಯಣ ರೈ ಅವರ 116ನೇ ಜನ್ಮ ದಿನಾಚರಣೆ ‘ಶೀಂಟೂರು ಸ್ಮೃತಿ-2023’

Mangaluru - Nishantha Narayana

ಪುತ್ತೂರು: ಸವಣೂರಿನ ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸ್ಥಾಪಕರಾದ ದಿ. ಶೀಂಟೂರು ನಾರಾಯಣ ರೈ ಅವರ 116ನೇ ಜನ್ಮ ದಿನಾಚರಣೆ ‘ಶೀಂಟೂರು ಸ್ಮೃತಿ-2023’ ಕಾರ್ಯಕ್ರಮ ಆ.14ರಂದು ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಹೇಳಿದರು.

ಸ್ವತಃ ಸೇವಾನಿಯೂ, ಶಿಕ್ಷಕರೂ ಆಗಿದ್ದ ದಿವಂಗತ ಶೀಂಟೂರರು ಆದರ್ಶ ಕೃಷಿಕರೂ, ಸಹಕಾರಿಗೂ ಆಗಿದ್ದರು. ವಿದ್ಯಾ ರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಕನಸನ್ನು ಕಂಡಿದ್ದರು. ಶೀಂಟೂರು ಶಿಕ್ಷಣ ಪ್ರತಿಷ್ಠಾನದಿಂದ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದಾರೆ. ಭಾರತೀಯ ನೌಕಾದಳದ ನಿವೃತ್ತ ಸೇನಾಧಿಕಾರಿ ವಿಕ್ರಂ ದತ್ತಾ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಮುಂಬಯಿಯ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಸನ್ಮಾನ ನಡೆಸಲಿದ್ದಾರೆ ಎಂದು ಸೋಮವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ಉಪ ಪ್ರಾಂಶುಪಾಲ ಶೇಶಗಿರಿ ಎಂ, ಶೀಂಟೂರು ಪ್ರತಿಷ್ಠಾನದ ವಿಶ್ವಸ್ಥ ಎನ್. ಸುಂದರ್ ರೈ ಉಪಸ್ಥಿತರಿದ್ದರು.