ಜಿಲ್ಲೆ

ಸವಣೂರ ಪುರಸಭೆ ಅಧ್ಯಕ್ಷಗಿರಿ ಯಾರಿಗೆ ?

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಸವಣೂರ: ಶಿಗ್ಗಾಂವಿ-ಸವಣೂರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯೊಂದಿಗೆ ಸ್ಥಳೀಯ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಸರ್ಕಾರ ಮೀಸಲಾತಿ ಘೊಷಣೆ ಹಿನ್ನೆಲೆಯಲ್ಲಿ ರಾಜಕೀಯ ಕಾವು ಹೆಚ್ಚಿದೆ.

ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನ ‘ಅ ವರ್ಗ’ ಹಾಗೂ ಉಪಾಧ್ಯಕ್ಷ ಸ್ಥಾನ ‘ಸಾಮಾನ್ಯ ಮಹಿಳೆ’ಗೆ ಮೀಸಲಾಗಿವೆ. ಸವಣೂರ ಪುರಸಭೆ 27 ಸದಸ್ಯ ಸ್ಥಾನಗಳನ್ನು ಹೊಂದಿದೆ. ಅದರಲ್ಲಿ 15 ಕಾಂಗ್ರೆಸ್, 9 ಬಿಜೆಪಿ, 1 ಜೆಡಿಎಸ್ ಹಾಗೂ 2 ಎರಡು ಪಕ್ಷೇತರ ಸದಸ್ಯರು ಇದ್ದಾರೆ.

ಸವಣೂರ ಪುರಸಭೆಯಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಇದ್ದರೂ ಮೊದಲ ಹಂತದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಚಾಣಾಕ್ಷತನದಿಂದ (ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿ ಬ ವರ್ಗದ ಮಹಿಳಾ ಸದಸ್ಯೆ ಇರಲಿಲ್ಲ) ಬಿಜೆಪಿ ಸದಸ್ಯೆ ಶೈಲಾ ಮುದಿಗೌಡ್ರ ಅಧ್ಯಕ್ಷೆಯಾಗಿದ್ದರು. ಆದರೆ, ಈ ಬಾರಿ ಅಂತಹ ಸನ್ನಿವೇಶ ಕ್ಷೇತ್ರದಲ್ಲಿ ಕಂಡು ಬರುತ್ತಿಲ್ಲ.

ಬಹುಮತ ಹೊಂದಿರುವ ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆ ಪಕ್ಷದ ವರಿಷ್ಠರಿಗೆ ತಲೆಬಿಸಿ ಮಾಡಿದೆ. ಕಾಂಗ್ರೆಸ್​ನ ಹಿರಿಯ ಸದಸ್ಯ ಅಬ್ದುಲ್​ಖಾದರ (ಅದ್ದು) ಪರಾಶ ಅವರು ನನಗೆ ಕಾಂಗ್ರೆಸ್​ನ 8 ಹಾಗೂ ಜೆಡಿಎಸ್​ನ ಒಬ್ಬರು ಸೇರಿ ಒಟ್ಟು 9 ಸದಸ್ಯರ ಬೆಂಬಲವಿದೆ. ಆದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಉಳಿದಿರುವ ಸದಸ್ಯರಿಗೂ ಪಕ್ಷದ ಪ್ರಮುಖರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಎಐಸಿಸಿ ಸದಸ್ಯ ಯಾಶೀರಖಾನ್ ಪಠಾಣ ಬೆಂಬಲಿಗರಾದ ಅಲ್ಲಾವುದೀನ್ ಮನಿಯಾರ, ಪೀರಅಹ್ಮದ ಗವಾರಿ ಹಾಗೂ ಫಜಲ್​ಅಹ್ಮದಖಾನ್ ಪಠಾಣ ಸಹ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವುದು ಗುಂಪುಗಾರಿಕೆಗೆ ಕಾರಣವಾಗಿದೆ.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದರೂ ಬಹುಮತ ಹೊಂದಿರುವ ಕಾಂಗ್ರೆಸ್ ಗುಂಪುಗಾರಿಕೆ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದೆ. 9 ಸದಸ್ಯರ ಬೆಂಬಲ ಹೊಂದಿರುವ ಕಾಂಗ್ರೆಸ್ ಹಿರಿಯ ಸದಸ್ಯ ಅಬ್ದುಲ್​ಖಾದರ ಪರಾಶ ಅವರು ಬಿಜೆಪಿಯ 9 ಹಾಗೂ ಇಬ್ಬರು ಪಕ್ಷೇತರ (ಬಿಜೆಪಿ ಬೆಂಬಲಿತ) ಸದಸ್ಯರ ಬೆಂಬಲ ಪಡೆದು 20 ಸದಸ್ಯರ ಬೆಂಬಲದೊಂದಿಗೆ ಸರಳ ಬಹುಮತದಿಂದ ಅಧ್ಯಕ್ಷ ಸ್ಥಾನ ಅಲಂಕರಿಸುವ ಉಮೇದಿನಲ್ಲಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ಲೀಲಾವತಿ ಗಾಣಗೇರ ಅವರಿಗೆ ದೊರೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ಹೈಕಮಾಂಡ್ ಎಲ್ಲ ಸದಸ್ಯರ ಒಮ್ಮತ ಪಡೆದು ಅದ್ದು ಪರಾಶ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದಲ್ಲಿ ಮಾತ್ರ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಮಹಿಳಾ ಸದಸ್ಯೆಗೆ ಒಲಿಯಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಬಿಜೆಪಿಗೆ ಬೊಮ್ಮಾಯಿ ಆಸರೆ
ಪಕ್ಷದಲ್ಲಿ ಸ್ಥಳೀಯ ನಾಯಕರ ಕೊರತೆ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸ್ಥಳೀಯ ರಾಜಕಾರಣದ ಕುರಿತು ಗಂಭೀರವಾಗಿ ಪರಿಗಣಿಸದಿರುವುದು ಪುರಸಭೆ ಬಿಜೆಪಿ ಸದಸ್ಯರ ಗೊಂದಲಕ್ಕೆ ಕಾರಣವಾಗಿದೆ. ಒಂದು ವೇಳೆ ಬೊಮ್ಮಾಯಿ ಅವರು ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಭಾಗಿಯಾದರೆ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ.

ಕಾಂಗ್ರೆಸ್​ನಲ್ಲಿ ಸೈಯದ್​ಅಜ್ಜಂಪೀರ ಖಾದ್ರಿ ತಟಸ್ಥ
ಪಕ್ಷದಲ್ಲಿ ಸ್ಥಳೀಯ ನಾಯಕರ ಕೊರತೆಯೊಂದಿಗೆ ಮಾಜಿ ಶಾಸಕ ಸೈಯದ್​ಅಜ್ಜಂಪೀರ ಖಾದ್ರಿ ಅವರ ತಟಸ್ಥ ನಿಲವು ಹಾಗೂ ಗುಂಪುಗಾರಿಕೆಯಿಂದ ಬಹುಮತ ಇದ್ದರೂ ಉಪಾಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದೆ.

ಸವಣೂರ ಪುರಸಭೆ ಕಾಂಗ್ರೆಸ್ ಸದಸ್ಯರಲ್ಲಿ ಯಾವುದೇ ರೀತಿಯ ಗುಂಪುಗಾರಿಕೆ ಇಲ್ಲ. ಸ್ಪಷ್ಟ ಬಹುಮತ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಪಕ್ಷದ ಸದಸ್ಯರು ಅಲಂಕರಿಸಲಿದ್ದಾರೆ.| ಎಂ.ಜೆ. ಮುಲ್ಲಾ ಸವಣೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರಸಭೆಯಲ್ಲಿ ಈ ಹಿಂದೆ ಸಹ ಬಹುಮತ ಇರಲಿಲ್ಲ. ಆದರೂ ಸಂಸದ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಅಧಿಕಾರ ಹಿಡಿದು ಉತ್ತಮ ಆಡಳಿತ ನೀಡಿದ್ದೇವೆ. ಈ ಬಾರಿಯೂ ಬಿಜೆಪಿ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಅಲಂಕರಿಸುತ್ತಾರೆ.| ಹನುಮಂತಗೌಡ ಮುದಿಗೌಡ್ರ ಬಿಜೆಪಿ ಸವಣೂರ ಮಂಡಳ ಅಧ್ಯಕ್ಷ