ಜಿಲ್ಲೆ

ಕಳ್ಳರ ಗುಂಪಿನ ಸದಸ್ಯನನ್ನು ಹಿಡಿದ ತಳ್ಳಳ್ಳಿ ಗ್ರಾಮಸ್ಥರು

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಸವಣೂರ: ಸರಣಿ ಕಳ್ಳತನದಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕಳ್ಳರ ಗುಂಪಿನ ಸದಸ್ಯನನ್ನು ಹಿಡಿದು ಗ್ರಾಮಸ್ಥರು ಧರ್ಮದೇಟು ನೀಡಿದ ಘಟನೆ ತಾಲೂಕಿನ ತಳ್ಳಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಕಳೆದ ತಿಂಗಳು ಗ್ರಾಮದಲ್ಲಿ ನಡೆದಿದ್ದ ಸರಣಿ ಕಳ್ಳತನ ಕುರಿತು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಯಾವುದೇ ಪ್ರಯೋಜನ ಆಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಾತ್ರಿ ಪಾಳಿಯಲ್ಲಿ ಕಳ್ಳರನ್ನು ಹಿಡಿಯಲು ರಚಿಸಿದ್ದ ತಂಡದ ಕಾರ್ಯಾಚರಣೆ ಯಶಸ್ವಿಯಾಗಿದೆ. ಸೋಮವಾರ ತಡರಾತ್ರಿ ಗ್ರಾಮದ ಮನೆಯೊಂದಕ್ಕೆ ಕಳ್ಳತನ ಮಾಡಲು ಮುಂದಾದ ಕಳ್ಳರ ತಂಡದ ಮೇಲೆ ಮುಗಿಬಿದ್ದ ರಾತ್ರಿ ಗಸ್ತಿನ ಯುವಕರ ತಂಡ ಕಳ್ಳರ ಗುಂಪಿನ ಒಬ್ಬನನ್ನು ಹಿಡಿದು ತೆಂಗಿನ ಮರಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಎಸ್​ಐ ಕಲ್ಲಪ್ಪ ರೂಗಿ ಹಾಗೂ ಸಿಬ್ಬಂದಿ ಸ್ಥಳೀಯರಿಂದ ಕಳ್ಳನನ್ನು ವಶಕ್ಕೆ ಪಡೆಯಲು ಮುಂದಾದರು. ಆಗ 10ಕ್ಕೂ ಹೆಚ್ಚಿನ ಜನರ ಗ್ರಾಮಸ್ಥರ ತಂಡ ಸರಣಿ ಕಳ್ಳತನ ಬಗ್ಗೆ ಪ್ರಕರಣ ದಾಖಲಿಸಿದ್ದರೂ ಪೊಲೀಸರು ಕಳ್ಳರನ್ನು ಹಿಡಿಯಲಿಲ್ಲ. ಈಗ ನಾವು ಹಿಡಿದಿರುವ ಕಳ್ಳನನ್ನು ಕರೆದುಕೊಂಡು ಹೋಗಲು ನಾವು ಅವಕಾಶ ನೀಡುವುದಿಲ್ಲ. ಕಳ್ಳರ ತಂಡದವರು ಆಗಮಿಸಿ ಅವನನ್ನು ಬಿಡಿಸಿಕೊಂಡು ಹೋಗಲಿ ಎಂದು ಪಟ್ಟು ಹಿಡಿದರು. ಆಗ ಸಾರ್ವಜನಿಕರು ಹಾಗೂ ಪೊಲೀಸ್ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು. ತಳ್ಳಳ್ಳಿ ಗ್ರಾಮಕ್ಕೆ ಪಿಐ ಆನಂದ ವನಕುದ್ರೆ ಭೇಟಿ ನೀಡಿ ಕಳ್ಳನನ್ನು ವಶಕ್ಕೆ ಪಡೆದು ಸವಣೂರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.