ಜಿಲ್ಲೆ

ಸವಣೂರ ಹಂಚಾಟೆ ಪ್ಲಾಟ್‌ನಲ್ಲಿಲ್ಲ ಮೂಲಸೌಲಭ್ಯ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಸವಣೂರ: ಪಟ್ಟಣದ ಹಂಚಾಟೆ ಪ್ಲಾಟ್ ಸುಸಜ್ಜಿತ ರಸ್ತೆ, ಗಟಾರ, ಬೀದಿದೀಪ ಸೇರಿದಂತೆ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಸ್ಥಳೀಯರು ತೊಂದರೆ ಪರದಾಡುವಂತಾಗಿದೆ.
ಪಟ್ಟಣದ 3ನೇ ವಾರ್ಡ್ ವ್ಯಾಪ್ತಿಗೆ ಬರುವ ಹಂಚಾಟೆ ಪ್ಲಾಟ್‌ನ ರಸ್ತೆಗಳಿಗೆ ಡಾಂಬರೀಕರಣ ಮಾಡಿಲ್ಲ. ಮನೆ ಬಳಕೆ ನೀರು, ಮಳೆ ನೀರು ಸರಿಯಾಗಿ ಹರಿಯಲು ರಸ್ತೆಯ ಎರಡು ಬದಿಗೆ ಚರಂಡಿ ನಿರ್ಮಾಣವಾಗಿಲ್ಲ. ವಿದ್ಯುತ್ ಕಂಬಗಳಿದ್ದರೂ ಅವುಗಳಲ್ಲಿ ಬೀದಿದೀಪ ಅಳವಡಿಸಿಲ್ಲ.
ಕಳೆದ ಕೆಲ ದಿನಗಳ ಹಿಂದೆ ನಿರಂತರ ಸುರಿದ ಮಳೆಗೆ ಕಚ್ಚಾ ರಸ್ತೆ ಸಂಪೂರ್ಣ ಹಾಳಾಗಿದೆ. ಹೀಗಾಗಿ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಮಧ್ಯೆ ಹಾಗೂ ಅಕ್ಕಪಕ್ಕದಲ್ಲಿ ಮುಳ್ಳಿನ ಕಂಟಿಗಳು ಬೆಳೆದು ನಿಂತಿವೆ. ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಅಲ್ಲಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿದೆ. ಇದು ಸೊಳ್ಳೆಗಳ, ರೋಗಗಳ ಉತ್ಪತ್ತಿಗೆ ಕಾರಣವಾಗಿದ್ದು, ವಯೋವೃದ್ಧರು, ಮಕ್ಕಳ ಆರೋಗ್ಯ ಹದಗೆಡುತ್ತಿದೆ.
ವಿಷಜಂತುಗಳು ರಸ್ತೆಯಲ್ಲಿ ಕಂಡುಬರುತ್ತಿವೆ. ಬೀದಿದೀಪದ ವ್ಯವಸ್ಥೆ ಇಲ್ಲದರಿರುವುದರಿಂದ ಸಂಜೆಯಾದರೆ ಓಡಾಡಲು ಭಯಪಡುವಂತಾಗಿದೆ.
ಸ್ಥಳೀಯರು ಪುರಸಭೆ, ಉಪವಿಭಾಗಾಧಿಕಾರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಈವರೆಗೆ ಸ್ಪಂದನೆ ಸಿಕ್ಕಿಲ್ಲ. ಸಾರ್ವಜನಿಕ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಿಕೊಡದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸವಣೂರಿನ 3ನೇ ವಾರ್ಡ್‌ನ ಹಂಚಾಟೆ ಪ್ಲಾಟ್ ಸಮಸ್ಯೆ ಕುರಿತು ಪುರಸಭೆ ಅಧಿಕಾರಿಗಳಿಗೆ ಹಾಗೂ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಮಸ್ಯೆ ಪರಿಹರಿಸದಿದ್ದಲ್ಲಿ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಲಿದೆ.ಮಂಜುನಾಥ ಕುಂಕೂರ 3ನೇ ವಾರ್ಡ್ ನಿವಾಸಿ