ಸವಣೂರ: ತಾಲೂಕಿನ ಡೊಂಬರಮತ್ತೂರ ಗ್ರಾಮದ ಆದಿದೇವ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ಏ.5ರಿಂದ 10ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಫಕ್ಕೀರ ಸಿದ್ದರಾಮ ಸ್ವಾಮೀಜಿ, ಹೂವಿನಶಿಗ್ಲಿಯ ಶ್ರೀ ಚನ್ನವೀರ ಸ್ವಾಮೀಜಿ, ಶ್ರೀ ನಿಜಗುಣ ಶಿವಯೋಗಿ ಸ್ವಾಮೀಜಿ, ನೆಗಳೂರಿನ ಶ್ರೀ ಗುರುಶಾಂತೇಶ್ವರ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಏ.5ರಂದು ಸಂಜೆ 7 ಗಂಟೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ಹೂವಿನ ರಥೋತ್ಸವ ಜರುಗಲಿದೆ. ಏ.6ರಂದು ಮಧ್ಯಾಹ್ನ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ಜರುಗಲಿದೆ. ಸಂಜೆ 4 ಗಂಟೆಗೆ ಪುರವಂತರು, ಭಜನಾ ಮೇಳ, ಝಾಂಜ್ ಮೇಳ, ಇತರ ವಾಧ್ಯಗಳೊಂದಿಗೆ ಶ್ರೀ ಬಸವೇಶ್ವರ ದೇವರ ರಥೋತ್ಸವ ಜರುಗಲಿದೆ.
ಏ.7ರಂದು ಎಡೆ ಕೊಡುವುದು, ಓಕಳಿ ಉತ್ಸವ, ಎತ್ತುಗಳ ಮೆರವಣಿಗೆ ನಡೆಯಲಿದೆ. ರಾತ್ರಿ 10ಕ್ಕೆ ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಏ.9ರಂದು ರಾತ್ರಿ 10ಕ್ಕೆ ಕಾಲು ಕೆದರಿದ ಹುಲಿ ನಾಟಕ ಪ್ರದರ್ಶನವಾಗಲಿದೆ. ಏ.8, 9, 10ರಂದು ಪ್ರಸಿದ್ಧ ಪೈಲ್ವಾನ್ ಗಳಿಂದ ಜಂಗೀ ನಿಕಾಲಿ ಕುಸ್ತಿ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.