ಸಾವಳಗಿ: ನೂತನ ತಾಲೂಕುಗಳ ಘೋಷಣೆಯಲ್ಲಿ ಸಾವಳಗಿಯನ್ನು ಕೈಬಿಟ್ಟಿದ್ದಕ್ಕೆ ಸಾವಳಗಿ ಹೋಬಳಿ ನಾಗರಿಕರು ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿ, ಪಂಚಾಯಿತಿ ಕಾರ್ಯಾಲಯದ ಮುಂದೆ ಸೋಮವಾರ ಧರಣಿ ನಡೆಸಿದರು.
ಹೋರಾಟ ಸಮಿತಿ ಮುಖಂಡ ಅಪ್ಪುಗೌಡ ಪಾಟೀಲ ಮಾತನಾಡಿ, ಧರಣಿ, ಸಾವಳಗಿ ಬಂದ್, ಮುಖ್ಯಮಂತ್ರಿಗಳ ಬಳಿ ನಿಯೋಗ, ಪತ್ರ ಚಳವಳಿ ಹಾಗೂ ಉಪವಾಸ ಸತ್ಯಾಗ್ರಹದಂತಹ ಹಲವಾರು ಹೋರಾಟಗಳನ್ನು ಮಾಡಿದರೂ ತಾಲೂಕು ಕೇಂದ್ರ ಘೋಷಿಸಲಿಲ್ಲ. ರಾಜ್ಯದಲ್ಲಿ ಹಲವಾರು ಗ್ರಾಮಗಳನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಸಾವಳಗಿ ಮಾತ್ರ ಇನ್ನು ಗ್ರಾಮವಾಗಿಯೇ ಉಳಿದಿರುವ ಪರಿಣಾಮವಾಗಿ ಗ್ರಾಪಂ ಚುನಾವಣೆ ಬಹಿಷ್ಕರಿಸಿದ್ದೇವೆ ಎಂದರು.
1948ರಲ್ಲಿ ಪಟವರ್ಧನ ರಾಜರ ಆಳ್ವಿಕೆಯಲ್ಲಿ ಸಾವಳಗಿಯನ್ನು ತಾಲೂಕು ಕೇಂದ್ರವಾಗಿ ಘೋಷಿಬೇಕೆಂದು ಮನವಿ ಸಲ್ಲಿಸಿದ್ದರೂ. 23 ಹಳ್ಳಿಗಳು ನಿತ್ಯ ವ್ಯವಹರಿಸುವ ಕೇಂದ್ರ ಸ್ಥಾನವಾಗಿದ್ದು, ಹುಂಡೆಕರ ಹಾಗೂ ಗದ್ದಿಗೌಡರ ವರದಿಗೆ ಸಮಿತಿ ವಿವರವಾದ ಮನವಿಗಳನ್ನು ಸಲ್ಲಿಸಿದೆ. ಎರಡು ಆಯೋಗದ ಕಡತಗಳು ಸರ್ಕಾರಕ್ಕೆ ತಲುಪಿದ್ದರೂ ಪ್ರಯೋಜನ ಆಗಿಲ್ಲ ಎಂದು ದೂರಿದರು.
ಆದಿನಾಥ ಸಕಳೆ ಮಾತನಾಡಿ, ಮಾಜಿ ಉಪರಾಷ್ಟ್ರಪತಿ ದಿ.ಬಿ.ಡಿ. ಜತ್ತಿ ಹಾಗೂ ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಕುಲಕರ್ಣಿ ಅವರ ಹುಟ್ಟುರಾದ ಈ ಗ್ರಾಮದಲ್ಲಿ ತಾಲೂಕಿಗೆ ಬೇಕಾಗುವ ಎಲ್ಲ ಇಲಾಖೆಯ ಸರ್ಕಾರಿ ಕಚೇರಿಗಳು ಇದ್ದು, ಒಂದು ಪೈಸೆ ಖರ್ಚು ಆಗದೆ ಸಾವಳಗಿಯನ್ನು ತಾಲೂಕು ಕೇಂದ್ರವನ್ನಾಗಿ ಸರ್ಕಾರ ರೂಪಿಸಬಹುದು. ಸದ್ಯದ ಹೋರಾಟಕ್ಕೆ ಸರ್ಕಾರ ಸಾವಳಗಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಸವರಾಜ ಪರಮಗೊಂಡ, ಸುಭಾಷ ಪಾಟೋಳಿ, ಸುರೇಶ ಎಕ್ಸಂಬೆ, ಕಾಶಿನಾಥ ಹಟ್ಟಿ, ತುಕಾರಾಮ ಬಾಪಕರ, ಮಾದೇವ ಮಾಳಿ, ರಾಮು ಬಂಡಿವಡ್ಡರ, ಅಮಿತ್ ಸೂರಗೊಂಡ, ಉಮೇಶ ಜಾಧವ, ಶ್ರೀಮಂತ ದಡ್ಡಿ ಸೇರಿದಂತೆ ಹಲವರು ಇದ್ದರು.
EndFragment