ಜಿಲ್ಲೆ

ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ 30ರ ವರೆಗೆ ಬಂದ್

ಉಗರಗೋಳ: ಶ್ರೀಕ್ಷೇತ್ರ ಎಳುಕೊಳ್ಳದ ರೇಣುಕಾ ಯಲ್ಲಮ್ಮನ ದೇವಸ್ಥಾನ ಸೆ. 1ರಿಂದ 30ರವರೆಗೆ (1 ತಿಂಗಳು) ದೇವಸ್ಥಾನಕ್ಕೆ ಬರುವಂತ ಭಕ್ತರಿಗೆ ದರ್ಶನಕ್ಕೆ ಅವಕಾಶ ಇಲ್ಲದಿರುವ ಕಾರಣ ಭಕ್ತರು ಸಹಕರಿಸಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಶ್ರೀಕ್ಷೇತ್ರ ಶ್ರೀರೇಣುಕಾ ಯಲ್ಲಮ್ಮನ ಗುಡ್ಡದಲ್ಲಿ ಕರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಪ್ರಾರ್ಥಿಸಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶದ ನಾನಾ ರಾಜ್ಯಗಳಿಂದ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ, ಭಕ್ತರ ಹಿತ ದೃಷ್ಟಿಯಿಂದ ಇನ್ನೂ ಒಂದು ತಿಂಗಳ ಕಾಲ ದೇವಸ್ಥಾನ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದರು.

ದೇವಸ್ಥಾನಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತಿದ್ದು ಮತ್ತು ಭಕ್ತರಿಗೋಸ್ಕರವಾಗಿ ದೇವಸ್ಥಾನದಲ್ಲಿ ಪ್ರಾರಂಭಿಸಿದ 265 ರೂಂಗಳನ್ನು ಆದಷ್ಟು ಬೇಗ ಲೋಕಾರ್ಪಣೆಗೊಳಿಸಲಾಗುವುದು ಎಂದರು. ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ, ಶ್ರೀ ರೇಣುಕಾ ಯಲ್ಲಮ್ಮನಿಗೆ ಎಂದಿನಂತೆ ದಿನನಿತ್ಯ ಅಭಿಷೇಕ, ವಿಶೇಷ ಪೂಜೆ, ವಿಧಿ ವಿಧಾನಗಳು ಜರಗುತ್ತಿವೆ.

ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಇಂದಿನವರೆಗೆ ದೇವಸ್ಥಾನಕ್ಕೆ ಸುಮಾರು 8 ಕೋಟಿ ರೂ. ನಷ್ಟವಾಗಿದೆ. ದೇವಸ್ಥಾನದಲ್ಲಿ ದೈಹಿಕ ಅಂತರ, ಮಾಸ್ಕ್ ಧರಿಸುವುದು,ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿದ್ದು, ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದರು. ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜಿರಗ್ಯಾಳ, ವೆಂಕಟ ಸೂನ್ನದ, ಸವದತ್ತಿ ಎಎಸ್‌ಐ ಎಸ್.ಆರ್. ಗೀರಿಯಾಲ, ರಾಮಾಚಾರಿ ಲಮಾಣಿ, ಸದಾನಂದ ಈಟಿ, ಈರಣ್ಣ ಕುಲಕರ್ಣಿ, ಪಂಡಿತ ರಾಜಶೇಖರಯ್ಯ, ಮಂಜನಗೌಡ ಸಂದಿಮನಿ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.