ಯಲಬುರ್ಗಾ: ಸಾಧನೆ ಎನ್ನುವುದು ಸಾಧಕನ ಸ್ವತ್ತೇ ಹೊರತು, ಸೋಮಾರಿಯದ್ದಲ್ಲ ಎಂಬ ಮಾತಿಗೆ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಸೌಭಾಗ್ಯ ಬೀಳಗಿಮಠ ಸೂಕ್ತ ನಿದರ್ಶನ.
2023ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದ ಟಾಪ್ ಮೂವರಲ್ಲಿ ಸೌಭಾಗ್ಯ ಬೀಳಗಿಮಠ ಒಬ್ಬರಾಗಿದ್ದಾರೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯ ವಿಜೇತಾ ಹೊಸಮನಿ 100ನೇ ರ‌್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. 101ನೇ ರ‌್ಯಾಂಕ್ ಪಡೆದಿರುವ ಸೌಭಾಗ್ಯ ಬೀಳಗಿಮಠ 2ನೇ ಸ್ಥಾನ ಪಡೆದುಕೊಂಡಿದ್ದಾರೆ. 160ನೇ ರ‌್ಯಾಂಕ್ ಪಡೆದಿರುವ ಕೋಲಾರದ ನಾಗೇಂದ್ರ ಬಾಬು ಕುಮಾರ್, ಮೂರನೇ ಸ್ಥಾನ ಪಡೆಯುವ ಮೂಲಕ ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ.
ಸೌಭಾಗ್ಯ ಬೀಳಗಿಮಠ ಮೂಲತಃ ಯಲಬುರ್ಗಾ ತಾಲೂಕಿನ ಮುಧೋಳದವರು. ಇವರು ಹುಟ್ಟಿ ಬೆಳೆದಿದ್ದೆಲ್ಲ ತಾಯಿ ತವರೂರು ದಾವಣಗೆರೆಯಲ್ಲಿ. ಇವರ ಕುಟುಂಬ ಹಲವು ವರ್ಷಗಳ ಕಾಲ ಕೃಷಿ ನಂಬಿ ಜೀವನ ಸಾಗಿಸಿದೆ. ಸೌಭಾಗ್ಯ ತಂದೆ ಶರಣಯ್ಯ ಸಹ ಕೃಷಿಕರೇ. ಕಳೆದ ಹತ್ತು ವಷರ್ದಿಂದ ದಾವಣಗೆರೆಯ ಶಾಮನೂರಿನಲ್ಲಿ ನರ್ಸರಿ ಮಾಡಿಕೊಂಡಿದ್ದಾರೆ. ತಾಯಿ ಶರಣಮ್ಮ ಗೃಹಿಣಿಯಾಗಿದ್ದಾರೆ. ಸೌಭಾಗ್ಯ ಅವರ ಅಣ್ಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಶ್ರವಣ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶರಣಯ್ಯ ಅವರು ಕಿಸಾನ್ ವಾರ್ತೆ ಎನ್ನುವ ಯೂಟ್ಯೂಬ್ ಚಾನೆಲ್ ಸಹ ತೆರೆದು ಅದರಲ್ಲೂ ಯಶಸ್ಸು ಕಂಡಿದ್ದಾರೆ. ಸೌಭಾಗ್ಯ, ದಾವಣಗೆರೆಯ ಎಂಎನ್‌ಎಸ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಸಿದ್ಧಗಂಗಾ ಪಿಯು ಕಾಲೇಜಿನಲ್ಲಿ ವಿಜ್ಞಾನ ಶಿಕ್ಷಣ ಮುಗಿಸಿದ್ದು, ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಕೃಷಿ ಪದವಿ ಪಡೆದಿದ್ದಾರೆ. ಬಿಎಸ್ಸಿ ಪದವಿಯ ಅಂತಿಮ ವರ್ಷದಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. ಆದರೆ, ಅದು ಸಫಲವಾಗಲಿಲ್ಲ. ಛಲ ಬಿಡದೆ ಎರಡನೇ ಅವಧಿಯಲ್ಲಿ ಪರೀಕ್ಷೆ ತೆಗೆದುಕೊಂಡು ಪ್ರತಿಫಲ ಪಡೆದಿದ್ದಾರೆ. ಈ ಮೂಲಕ ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿದ್ದಾರೆ.
ಜೀವನದಲ್ಲಿ ಕನಸು ಕಾಣಲು ಕಂಜ್ಯೂಸ್‌ತನ ಇರಬಾರದು. ದೃಢಸಂಕಲ್ಪ, ಶ್ರದ್ಧೆ, ಗುರಿ ಮತ್ತು ಓದಿನಲ್ಲಿ ಆಸಕ್ತಿ ಇದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಾಗ ನಮ್ಮ ಗುರಿ ದೊಡ್ಡದಿರಬೇಕು. ಓದೇ ಆಗಲಿ ಕೆಲಸವೇ ಆಗಲಿ ಕಷ್ಟಪಟ್ಟು ಮಾಡುವುದಕ್ಕಿಂತ ಇಷ್ಟಪಟ್ಟು ಮಾಡಿದರೆ ಸಾಧನೆ ಸಾಧ್ಯವಾಗುತ್ತದೆ.ಸೌಭಾಗ್ಯ ಬೀಳಗಿಮಠಯುಪಿಎಸ್ಸಿಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಬಂದ ಅಭ್ಯರ್ಥಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಲು ದುಡ್ಡಿರಬೇಕು ಹಾಗೂ ದೊಡ್ಡ-ದೊಡ್ಡ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿರಬೇಕು ಎನ್ನುವ ಮಾತು ಜನಜನಿತವಾಗಿದೆ. ಆದರೆ, ಪರೀಕ್ಷೆ ಪಾಸಾಗಲು ದುಡ್ಡು ಮತ್ತು ದೊಡ್ಡ ಸಂಸ್ಥೆಗಳಿಗಿಂತ ಶ್ರದ್ಧೆ ಮತ್ತು ನಿರಂತರ ಅಭ್ಯಾಸ ಮುಖ್ಯ. ನನ್ನ ಮಗಳು ಎರಡನೇ ಪ್ರಯತ್ನದಲ್ಲಿಯೇ ಈ ಸಾಧನೆ ಮಾಡಿರುವುದು ಖುಷಿ ತಂದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನನ್ನ ಮಗಳಂತಹ ಯುವ ಪ್ರತಿಭೆಗಳಿದ್ದಾರೆ. ಅವರು ಸತತ ಪರಿಶ್ರಮಪಟ್ಟರೆ ಯಶಸ್ಸು ದೊರೆಯುತ್ತದೆ.ಶರಣಯ್ಯ ಬೀಳಗಿಮಠಸೌಭಾಗ್ಯ ತಂದೆ