ಜಿಲ್ಲೆ

ರೈತ ಸಂಘಟನೆಗಳಿಂದ ಸತ್ಯಾಗ್ರಹ

ನರಗುಂದ: ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯಾದ ಮಹದಾಯಿ, ಕಳಸಾ-ಬಂಡೂರಿ ಯೋಜನೆ ತಕ್ಷಣ ಜಾರಿಯಾಗಬೇಕು. 1980ರಲ್ಲಿ ಮಡಿದ ಹುತಾತ್ಮ ರೈತನ ಸ್ಮಾರಕ ಭವನ ನಿರ್ಮಾಣ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದ ಈರಪ್ಪ ಕಡ್ಲಿಕೊಪ್ಪ ವೀರಗಲ್ಲಿನ ಬಳಿ ಕರ್ನಾಟಕ ರೈತ ಸಂಘಟನೆ, ಮಹದಾಯಿ, ಕಳಸಾ, ಬಂಡೂರಿ ಹೋರಾಟ ಸಮಿತಿ, ಕನ್ನಡಪರ, ದಲಿತ ಪರ ಹಾಗೂ ವಿವಿಧ ಹೋರಾಟ ಸಮಿತಿ ಒಕ್ಕೂಟ ಸಂಘಟನೆಗಳ ಸದಸ್ಯರು ಬುಧವಾರ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಮಹದಾಯಿ ಮಹಾವೇದಿಕೆ ಅಧ್ಯಕ್ಷ ಶಂಕರಪ್ಪ ಅಂಬಲಿ ಮಾತನಾಡಿ, ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ದಶಕಗಳಿಂದಲೂ ನಿರಂತರ ಪ್ರತಿಭಟನೆ, ಮನವಿ ಸಲ್ಲಿಕೆ, ರಸ್ತಾ ರೋಕೋ ಹಲವಾರು ರೀತಿಯ ಹೋರಾಟ ನಡೆಸಲಾಗಿದೆ. ಆದರೆ, ಯಾವುದೇ ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳು ರೈತರ ಬೇಡಿಕೆ ಈಡೇರಿಕೆಗೆ ಸ್ಪಂದಿಸುತ್ತಿಲ್ಲ. ಮತ್ತೊಂದೆಡೆ ಗೋವಾ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಿನಾಕಾರಣ ಯೋಜನೆಗೆ ತಕರಾರು ಅರ್ಜಿ ಸಲ್ಲಿಸಿದೆ. ಈ ಬಗ್ಗೆ ರಾಜಕೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯತನ ಸಲ್ಲ ಎಂದರು.
ಮಹದಾಯಿ ಕಿರು ಹಳ್ಳಗಳಾದ ಹಳತಾರ, ಚೊರ‌್ಲಾ, ಪೋಟ್ಲಾ ಮುಂತಾದವುಗಳಿಂದ 1.7 ಟಿಎಂಸಿ ನೀರು ದೊರೆಯಲಿದೆ. ಆದರೆ, ಖಾನಾಪೂರ ಅರಣ್ಯ ಪ್ರದೇಶದಲ್ಲಿ ಟೈಗರ್ ಕಾರಿಡಾರ್, ಪರಿಸರ ಇಲಾಖೆಯಿಂದ ಅನುಮತಿ ಪಡೆದುಕೊಳ್ಳುವುದು ಅತ್ಯಗತ್ಯವೆಂದು ಹೇಳುತ್ತಿರುವ ಕೇಂದ್ರ ಸರ್ಕಾರವೇ ಯೋಜನೆಗೆ ಅನುಮತಿ ನೀಡುತ್ತಿಲ್ಲ. ದೇಶದ ಯಾವುದೇ ಕುಡಿಯುವ ನೀರಿನ ಯೋಜನೆಗೆ ಯಾವುದೇ ತಕರಾರಿಲ್ಲ ಎಂದು ಈಗಾಗಲೇ ನ್ಯಾಯಾಲಯದ ಆದೇಶವಿದೆ. ಆದರೆ, ಕ್ಷುಲ್ಲಕ ರಾಜಕಾರಣದಿಂದ ಯೋಜನೆಗೆ ಹಿನ್ನೆಡೆ ಉಂಟಾಗುತ್ತಿರುವುದು ನೋವು ತರಿಸಿದೆ. ಅಲ್ಲದೆ, 1980ರಲ್ಲಿ ನಡೆದ ರೈತ ಹೋರಾಟದಲ್ಲಿ ಮಡಿದ ಚಿಕ್ಕನರಗುಂದದ ಈರಪ್ಪ ಕಡ್ಲಿಕೊಪ್ಪ ಅವರ ಸ್ಮಾರಕ ಭನವ ನಿರ್ಮಾಣವೂ ಗಗನ ಕುಸುಮವಾಗಿದೆ. ಸರ್ಕಾರ, ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷೃ ಧೋರಣೆ ಖಂಡಿಸಿ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಾಬಳೆ, ತಾಲೂಕು ಅಧ್ಯಕ್ಷ ವಿಠಲ ಜಾಧವ, ಚನ್ನು ನಂದಿ ಮಾತನಾಡಿದರು. ಚಂದ್ರಗೌಡ ಪಾಟೀಲ, ಶಿವಪ್ಪ ಸಾತನ್ನವರ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಂಚಾಲಕ ಎಸ್.ಬಿ. ಪಾಟೀಲ, ಬಸವರಾಜ ತಾವರೆ, ನಭಿಸಾಬ ಕಿಲ್ಲೆದಾರ, ರೈತ ಮುಖಂಡರು ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು.