ಜಿಲ್ಲೆ

ಮೂರು ಸಾವಿರ ಸತ್ಯದರ್ಶನ; 45 ದಿನ ಗಡುವು ನೀಡಿದ ದಿಂಗಾಲೇಶ್ವರ ಶ್ರೀ

ಹುಬ್ಬಳ್ಳಿ:  ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿವಾದಕ್ಕೆ ಸಂಬಂಧಿಸಿದ ಅತ್ಯಂತ ಕುತೂಹಲದ ‘ಸತ್ಯದರ್ಶನ ಸಭೆ’ಗೆ ಮಠದ ಆವರಣದಲ್ಲಿ ಅನುಮತಿ ನೀಡದಿದ್ದರಿಂದ ಬಾಲೇಹೊಸೂರು ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಭಾನುವಾರ ಮಧ್ಯಾಹ್ನ ಮಠದ ಎದುರಿನ ಬೀದಿಯಲ್ಲಿ ಸುಡುಬಿಸಿಲಿನಲ್ಲೇ ಭಕ್ತ ಸಮೂಹದೆದುರು ಸಾಕ್ಷಿ-ಸಂದರ್ಭಗಳ ಸಮೇತ ಭರ್ಜರಿ ಸಭೆ ನಡೆಸಿದರು.

ಸಾವಿರಾರು ಭಕ್ತರು ಅಲ್ಲಿ ಜಮಾಯಿಸಿದ್ದರು. ಮಠದ ಮಹಾದ್ವಾರದ ಹೊರಗೇ ತಡೆದು ನಿಲ್ಲಿಸಿದ್ದಕ್ಕೆ ಅವರ ಅಂತರಂಗದಲ್ಲಿ ಆಕ್ರೋಶ ಮಡುಗಟ್ಟಿತ್ತು. ಆದಾಗ್ಯೂ, ಭಕ್ತರು ಸೂಜಿ ಬಿದ್ದರೂ ಸದ್ದು ಕೇಳಿಸುವಷ್ಟು ಮೌನದಿಂದ ನಿಂತು ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಮಾತು ಆಲಿಸಿದರು.

ಸೌಂಡ್ ಸಿಸ್ಟಮ್ ಇಟ್ಟಿದ್ದ ವಾಹನದಲ್ಲಿ ನಿಂತೇ ಭಕ್ತರನ್ನುದ್ದೇಶಿಸಿ ಮಾತನಾಡಿದ ಸ್ವಾಮೀಜಿ, ತಾವು ಹೇಳಬೇಕೆಂದುಕೊಂಡಿದ್ದರಲ್ಲಿ ಬಹುತೇಕ ವಿಷಯಗಳನ್ನು ಸ್ಪಷ್ಟ ಶಬ್ದಗಳಲ್ಲಿ, ವ್ಯಕ್ತಿ-ಸಾಕ್ಷಿಗಳ ಹೆಸರು ಹೇಳಿ ತಿಳಿಸಿದರು. ಬೇಡವೇ ಬೇಡ ಎಂದರೂ ಕೇಳದೇ ತಮ್ಮನ್ನು ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ (ಮೂಜಗು) ಹೇಗೆ ಒತ್ತಾಯಿಸಿ ಕರೆತಂದು ಒಪ್ಪಿಸಿ, ಮಠಾಧೀಶರು ಮತ್ತು ಗಣ್ಯ ಭಕ್ತರ ಸಹಿ ಹಾಕಿಸಿ ನೇಮಣೂಕಿ ಪತ್ರ ಸಿದ್ಧಪಡಿಸಿದರು.

ಕೆಲವರ ಚಿತಾವಣೆಯಿಂದಾಗಿ ಹೇಗೆ ತಮಗೆ ಅನ್ಯಾಯ ಮತ್ತು ಅವಮಾನವಾಯಿತು, ಅದನ್ನು ಸರಿಪಡಿಸುವಂತೆ 6 ವರ್ಷದಿಂದ ಎಷ್ಟು ಪರಿಪರಿಯಾಗಿ ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ, ಕೊನೆಗೆ ಭಕ್ತರ ಮಧ್ಯೆ ಬರಲೇಬೇಕಾದ ಇಂದಿನ ಸನ್ನಿವೇಶಕ್ಕೆ ಕಾರಣ ಯಾರು ಎನ್ನುವುದನ್ನು ಎಳೆಎಳೆಯಾಗಿ ವಿವರಿಸಿದರು.

ಮೂಜಗು ಅವರು ಈಗಲೇ ಶ್ರೀ ಗುರುಸಿದ್ಧೇಶ್ವರರ ಕರ್ತೃ ಗದ್ದುಗೆ ಎದುರಿಗೆ ಬಂದು ‘ನಿಮ್ಮನ್ನು ಉತ್ತರಾಧಿಕಾರಿಯಾಗಿ ನೇಮಿಸಿಲ್ಲ’ ಎಂದು ಹೇಳಿಬಿಡಲಿ. ಈ ಕ್ಷಣದಲ್ಲಿ ಎಲ್ಲ ದಾಖಲೆಗಳನ್ನು ಸುಟ್ಟುಹಾಕಿ ಬಾಲೇಹೊಸೂರು ಮಠಕ್ಕೆ ಹಿಂದಿರುಗಲು ಸಿದ್ಧ ಎಂದು ಸವಾಲನ್ನೂ ಹಾಕಿದರು. ಇಷ್ಟೆಲ್ಲ ನಡೆದರೂ ಮಠದಲ್ಲೇ ಇದ್ದ ಮೂಜಗು ಹೊರಗೆ ಬರಲಿಲ್ಲ. ಯಾವುದೇ ಸಂದೇಶವನ್ನೂ ಕಳುಹಿಸಲಿಲ್ಲ. ಉನ್ನತಾಧಿಕಾರ ಸಮಿತಿಯವರೂ ಬರಲಿಲ್ಲ. ‘ನನ್ನನ್ನು ಕರೆತಂದ ಜಗದ್ಗುರು ಬಂಧಿಯಾಗಿದ್ದಾರೆ. ನಾನೀಗ ಬೀದಿಯಲ್ಲಿದ್ದೇನೆ’ ಎಂದು ದಿಂಗಾಲೇಶ್ವರರು ಮಾರ್ವಿುಕವಾಗಿ ನುಡಿದರು.

ಕೊನೆಗೆ, ಹೋರಾಟ ಇಷ್ಟಕ್ಕೇ ಮುಗಿಯುವುದಿಲ್ಲ. ಇನ್ನು 45 ದಿನ ಬಾಯಿಮುಚ್ಚಿಕೊಂಡು ಕುಳಿತಿರುತ್ತೇವೆ. ಅಷ್ಟರಲ್ಲಿ ಒಟ್ಟಾರೆ ತೀರ್ವನಕ್ಕೆ ಬಂದರೆ ಬಹಳ ಒಳ್ಳೆಯದು ಎನ್ನುವ ಮೂಲಕ ಮೂಜಗು ಅವರ ಸುತ್ತ ಇರುವವರಿಗೆ ಕಠಿಣ ಎಚ್ಚರಿಕೆಯನ್ನೂ ನೀಡಿ, ಮಾತು ಮುಗಿಸಿದರು. ನಂತರ ಮಠಕ್ಕೆ ತೆರಳಿ ಗದ್ದುಗೆ ದರ್ಶನ ಮಾಡಿಕೊಂಡು ಹೊರಗೆ ಬಂದರು.

ಭಕ್ತರ ಘೊಷಣೆ: ಸತ್ಯದರ್ಶನ ಸಭೆಗೆ ಸೇರಿದ್ದ ಸಾವಿರಾರು ಭಕ್ತರು ಹಾಗೂ ವಿವಿಧೆಡೆಯಿಂದ ಬಂದ ಗಣ್ಯರು ಶ್ರೀ ದಿಂಗಾಲೇಶ್ವರ ಸ್ವಾಮಿಗಳೇ ಮೂರುಸಾವಿರ ಮಠದ ಉತ್ತರಾಧಿಕಾರಿ. ಇನ್ನುಮುಂದೆ ಅವರನ್ನು ಹಾಗೆಯೇ ಪೂಜ್ಯ ಭಾವನೆಯಿಂದ ಸಂಬೋಧಿಸುತ್ತೇವೆ ಎಂದು ಬಹಿರಂಗವಾಗಿ ಘೊಷಿಸಿ, ಮಾಲಾರ್ಪಣೆ ಮಾಡಿದರು.

ಬಾಲೇಹೊಸೂರಿಗೆ ಹೋಗಿ ಶ್ರೀ ದಿಂಗಾಲೇಶ್ವರರನ್ನು ಮನವೊಲಿಸಿ ಆಹ್ವಾನಿಸಲು ನೀವೇ ಹೋಗಿ ಎಂದು ಮೂಜಗು ಅವರು ನನ್ನನ್ನು ಮತ್ತು ಇನ್ನೊಬ್ಬರನ್ನು ಕಳುಹಿಸಿಕೊಟ್ಟಿದ್ದರು. ಇನ್ನೊಬ್ಬರು ಈಗ ಬದುಕಿಲ್ಲ. ನಾನು ಇದ್ದೇನೆ. ಸತ್ಯ ಹೇಳುತ್ತೇನೆ- ಉತ್ತರಾಧಿಕಾರಿ ಯಾಗಲು ದಿಂಗಾಲೇಶ್ವರರನ್ನು ಒತ್ತಾಯಪೂರ್ವಕ ಒಪ್ಪಿಸಿ ಫಲ-ತಾಂಬೂಲ ಕೊಟ್ಟು ವಿಧ್ಯುಕ್ತವಾಗಿ ಆಹ್ವಾನಿಸಲಾಗಿತ್ತು. | ಶೇಖಣ್ಣ ಬೆಂಡಿಗೇರಿ ಹಿರಿಯ ಭಕ್ತ