ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರಕ್ಕಾಗಿ ಕಾರವಾರದಲ್ಲಿ 4,114 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಪ್ರಸ್ತುತ 1,400 ಸಾಮರ್ಥ್ಯದ 5 ಮತ್ತು 6 ನೇ ಘಟಕಗಳನ್ನು ಸ್ಥಾಪಿಸುತ್ತಿದೆ.
ಈ ವಿಸ್ತರಣಾ ಯೋಜನೆಗಳಲ್ಲಿ ಸ್ಥಳೀಯರಿಗೆ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ವಿಶೇಷ ಉದ್ಯೋಗಾವಕಾಶಗಳನ್ನು ಒದಗಿಸುವಂತೆ ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಅವರ ನೇತೃತ್ವದ ನಿಯೋಗವು ಕೇಂದ್ರ ಅಣುಶಕ್ತಿ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಒತ್ತಾಯಿಸಲಿದೆ.
ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಅವರ ನೇತೃತ್ವದ ನಿಯೋಗವು, ಶೀಘ್ರದಲ್ಲಿ ತಮ್ಮನ್ನು ಭೇಟಿ ಮಾಡಲು ಅನುಕೂಲವಾಗುವಂತೆ ಸಮಯವನ್ನು ನೀಡುವಂತೆ ರಾಜ್ಯ ಸಭಾ ಸದಸ್ಯ ರಣದೀಪ್ ಸಿಂಗ್ ಸುರ್ಜೇವಾಲ ಅವರು ಕೇಂದ್ರ ಅಣುಶಕ್ತಿ ಇಲಾಖೆಯ ರಾಜ್ಯ ಸಚಿವರನ್ನು ಕೋರಿದ್ದು, ತಾವೂ ಕೂಡಾ ಈ ನಿಯೋಗದೊಂದಿಗೆ ಆಗಮಿಸುವುದಾಗಿ ತಿಳಿಸಿದ್ದಾರೆ.
ಕೈಗಾ ಅಣು ವಿದ್ಯುತ್ ಸ್ಥಾವರಕ್ಕಾಗಿ ಸ್ಥಳೀಯ ಜನತೆ ತಮ್ಮ ಕೃಷಿ ಭೂಮಿ ಸೇರಿದಂತೆ ಮನೆ ಆಸ್ತಿಪಾಸ್ತಿಗಳನ್ನು ಬಿಟ್ಟುಕೊಟ್ಟು ಸಂತ್ರಸ್ಥರಾಗಿದ್ದು, ಇವರಿಗೆ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸೂಕ್ತ ಉದ್ಯೋಗವಕಾಶಗಳನ್ನು ನೀಡುವುದರ ಮೂಲಕ ಅವರ ನೆಮ್ಮದಿಯ ಬದುಕಿಗೆ ನೆರವಾಗಬೇಕು ಎಂದು ಕೇಂದ್ರ ಅಣುಶಕ್ತಿ ಇಲಾಖೆಯ ರಾಜ್ಯ ಸಚಿವರನ್ನು ಒತ್ತಾಯ ಮಾಡುವುದರ ಜೊತೆಗೆ ಸಂತ್ರಸ್ಥರಿಗೆ ಕೈಗಾದಲ್ಲಿ ಉದ್ಯೋಗ ದೊರಕಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಶಾಸಕ ಸೈಲ್ ತಿಳಿಸಿದ್ದಾರೆ.