ಜಿಲ್ಲೆ

ಮೈಸೂರಿಗೆ ಸತೀಶ್ ಜಾರಕಿಹೊಳಿ ಭೇಟಿ, ವಿವಿಧ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರು ಮೈಸೂರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಂಗಳವಾರ ದಿಢೀರ್ ಭೇಟಿಯ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು.


ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಭೇಟಿ ಮಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಂಜೆ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.


ದೆಹಲಿ ಭೇಟಿಯ ನಂತರ ರಾಜ್ಯದ ಪ್ರಮುಖ ನಾಯಕರನ್ನು ಭೇಟಿ ಮಾಡುತ್ತಿರುವ ಅವರು ಯಾವುದೇ ಅಧಿಕೃತ ಕಾರ್ಯಕ್ರಮ ಇಲ್ಲದಿದ್ದರೂ ಇಡೀ ದಿನ ನಾಯಕರ ಭೇಟಿಗೆ ಸಮಯ ಮೀಸಲಿಟ್ಟರು.


ದಸರಾ ಮಹೋತ್ಸವದ ಬಿಜಿಯಲ್ಲಿದ್ದ ಡಾ.ಎಚ್.ಸಿ.ಮಹದೇವಪ್ಪ ಅವರೊಂದಿಗೆ ನಗರದ ಪಂಚತಾರಾ ಹೋಟೆಲ್‌ನಲ್ಲಿ ರಹಸ್ಯ ಮಾತುಕತೆ ನಡೆಸಿದ್ದು, ಈ ನಾಯಕರಿಬ್ಬರ ಭೇಟಿ ಸ್ವಾಭಾವಿಕವೆಂದು ಹೇಳಲಾಗಿದ್ದರೂ, ಪಕ್ಷದ ಒಳಗಿನ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ದೆಹಲಿಯ ಬಳಿಕ ರಾಜ್ಯಕ್ಕೆ ಆಗಮಿಸಿದ ಅವರು, ದಲಿತ, ಹಿಂದುಳಿದ ವರ್ಗಗಳ ಸಚಿವರು, ಶಾಸಕರ ಕಾರ್ಯ ಭೇಟಿ ಮುಂದುವರಿಸಿದ್ದಾರೆ. ಇದು ರಾಜಕೀಯದಲ್ಲಿ ವಿವಿಧ ಆಯಾಮದಲ್ಲಿ ಕುತೂಹಲ ಮೂಡಿಸಿದೆ.


ಇದಕ್ಕೂ ಮುನ್ನ, ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ ಮನೆಗೆ ಸಚಿವ ಸತೀಶ್ ಜಾರಕಿಹೋಳಿ ಭೇಟಿ ನೀಡಿ ಉಪಾಹಾರ ಸೇವಿಸಿದರು. ಇಲ್ಲಿಗೆ ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಸಹ ಆಗಮಿಸಿದರು. ಅಲ್ಲಿಂದ ಕೆ.ಜಿ.ಕೊಪ್ಪಲಿನಲ್ಲಿರುವ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಮನೆಗೆ ಸಚಿವ ಜಾರಕಿಹೋಳಿ ತೆರಳಿದರು. ಅಲ್ಲಿ ಕೆ.ಆರ್.ನಗರ ಶಾಸಕ ಡಿ.ರವಿಶಂಕರ್, ಮುಡಾ ಅಧ್ಯಕ್ಷ ಕೆ.ಮರೀಗೌಡ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಇಲ್ಲಿಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸಹ ಆಗಮಿಸಿದರು.


ಈ ವೇಳೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸೋಲಿನ ಕುರಿತು ಚರ್ಚಿಸಲಾಯಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರವನ್ನು ಗೆಲ್ಲಬಹುದಿತ್ತು ಎಂದು ಸಚಿವ ಜಾರಕಿಹೋಳಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಲ್ಲಿದ್ದ ಶಾಸಕರು, ಕಾಂಗ್ರೆಸ್ ಅಭ್ಯರ್ಥಿ ಸರಿ ಇರಲಿಲ್ಲ. ಇದರಿಂದ ಸೋಲಾಯಿತು ಎಂದು ಪ್ರತಿಕ್ರಿಯಿಸಿದರು. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಎಂ.ಲಕ್ಷ್ಮಣ್ ಸೋಲು ಕಂಡಿದ್ದರು.


ಮಧ್ಯಾಹ್ನ ತಮ್ಮ ಬೆಂಬಲಿಗ ಎಸ್.ಆರ್.ರವಿಕುಮಾರ್ ಅವರ ನಿವಾಸದಲ್ಲಿ ಊಟ ಮಾಡಿದರು. ಜಲದರ್ಶಿನಿ ಅತಿಥಿಗೃಹದಲ್ಲಿ ಹಲವು ನಾಯಕರೊಂದಿಗೆ ಚರ್ಚೆ ನಡೆಸಿದರು.