ಜಿಲ್ಲೆ

ವೇದಗಳಲ್ಲಿನ ಸಾಮವೇದದಿಂದ ಬಂದ ಕಲೆ ಸಂಗೀತ: ಎಚ್. ಸುಬ್ರಹ್ಮಣ್ಯ ಜೋಯಿಸ್

ಪಂಕಜ ಕೆ.ಎಂ.

ಬೆಂಗಳೂರು: ವೇದಗಳಲ್ಲಿ ಸಾಮವೇದದಿಂದ ಬಂದಂತಹ ಸಂಗೀತ ಕಲೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ ಎಂದು ಹಿರಿಯ ವಕೀಲ ಎಚ್. ಸುಬ್ರಹ್ಮಣ್ಯ ಜೋಯಿಸ್ ಹೇಳಿದರು.

ಸತೀಶ್ ಹಂಪಿಹೊಳಿ ಮ್ಯೂಜಿಕ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ಭಾನುವಾರ ನಡೆದ ‘ಸಂಗೀತ ಶ್ರಾವಣ’ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನುಷ್ಯನಿಗೆ ಸ್ವಲ್ಪವಾದರೂ ಸಂಗೀತದಲ್ಲಿ ಅಭಿರುಚಿ ಇರಬೇಕು. ಯಾರು ಸಾಹಿತ್ಯ ಮತ್ತು ಸಂಗೀತ ಕಲೆಯ ಬಗ್ಗೆ ಆಸಕ್ತಿ ಇಲ್ಲವೆ ಅಭಿರುಚಿ ಹೊಂದಿರುವುದಿಲ್ಲವೋ ಅಂತಹವರು ಬಾಲ ಕೊಂಬು ಇಲ್ಲದ ಪಶುವಿನಂತೆ ಎಂದ ಅವರು, ಸಂಗೀತ ಶಿಕ್ಷಣ ನೀಡುವುದ ಜೊತೆಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಗೀತವನ್ನು ಹಾಗೂ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುತ್ತಿರುವ ಸತೀಸ್ ಹಂಪಿಹೊಳಿ ಅವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಲಾವಿದೆ ಯಮುನಾ ಶ್ರೀನಿಧಿ ಮಾತನಾಡಿ, ನಾಡಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಸಂಗೀತ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಮಾತನಾಡಿ, ಪಂ. ಬಸವರಾಜ ಬೆಂಡಿಗೇರಿ ಅವರ ಶಿಷ್ಯ ಪಂ. ಸತೀರ್ಶ ಹಂಪಿಹೊಳಿ ಅವರು ಸೇರಿ ಸಾವಿರಾರು ಶಿಷ್ಯರು ನಾಡಿನ ಕಲೆಯನ್ನು ವಿಶ್ವದಾದ್ಯಂತ ಪ್ರಚುರಪಡಿಸುತ್ತಿದ್ದಾರೆ. ಇವರ ಮೂಲಕ ಈ ಸಂಗೀತ ಕಲೆ ಮುಂದಿನ ಪೀಳಿಗೆಗೂ ತಲುಪಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ತಬಲಾ ವಾದಕ ಪಂಡಿತ್ ಸಂತೋಷ್ ಕುಲಕರ್ಣಿ ಅವರಿಗೆ ‘ಸದ್ಗುರುಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಇದಕ್ಕೂ ಮೊದಲು ಪಂಡಿತ್ ಸಂತೋಷ್ ಕುಲಕರ್ಣಿ ಹಾಘೂ ಲೆಹರಾನ ಡಾ. ಅರಣ್ಯಕುಮಾರ್ ಅವರು ಸಹಕಾರದಲ್ಲಿ ತಬಲಾ ಸೋಲೋ ನಡೆಸಿಕೊಟ್ಟರು. ಸೀಮಾ ರಾಯ್ಕರ್ ಅವರಿಂದ ಭಾವ ಸಿಂಚನ, ಸತೀಶ್ ಹಂಪಿಹೊಳಿ ಮ್ಯೂಜಿಕ್ ಫೌಂಡೇಶನ್ ಟ್ರಸ್ಟ್ ವಿದ್ಯಾರ್ಥಿಗಳಿಂದ ತಬಲಾ ತರಂಗ್, ಶ್ರೀ ಗುರುಕುಮಾರ ಪಂಚಾಕ್ಷರೇಶ್ವರ ಕಲಾವೇದಿಕೆ ವಿದ್ಯಾರ್ಥಿಗಳು ಸಮೂಹ ಗಾಯನ ಪ್ರಸ್ತುತ ಪಡಿಸಿದರು.

ಕಾರ್ತೀಕ್ ಫೌಂಡೇಷನ್ ಕಾರ್ಯದರ್ಶಿ ರೇಖಾ ಕೆ. ಗೋವಿಂದ್, ಚೈತನ್ಯ ಸಮಗ್ರ ಸೇವಾ ಸಂಸ್ಥೆಯ ಮುಖ್ಯಸ್ಥೆ ಚಿತ್ರ ನಾಗಶಯನ, ಪಂಡಿತ್ ಸತೀಶ್ ಹಂಪಿಹೊಳಿ ಇತರರು ಇದ್ದರು.