ಜಿಲ್ಲೆ

ಭಾಗವತ ಶ್ರವಣದಿಂದ ಭಗವಂತನ ಮಹಿಮೆ ಅರಿಯಲು ಸಾಧ್ಯ

ಹುಬ್ಬಳ್ಳಿ : ಭಗವಂತನ ವಿವಿಧ ಅವತಾರಗಳ ಮಹಿಮೆ ಅರಿಯಲು ಹಾಗೂ ಪುಣ್ಯಪ್ರಾಪ್ತಿಗೆ ಭಾಗವತ ಶ್ರವಣದಿಂದ ಸಾಧ್ಯ ಎಂದು ಪಂಡಿತ ಸತ್ಯಮೂರ್ತಿ ಆಚಾರ್ಯ ಹೇಳಿದರು.

ಹುಬ್ಬಳ್ಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಪ್ರತಿ ತಿಂಗಳು ಆಯೋಜಿಸುವ ಭಾಗವತ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಪ್ರವಚನ ಮಾಡಿದರು.

ಹಲವಾರು ಪುರಾಣಗಳಲ್ಲಿ ಭಾಗವತ ಒಂದು ವಿಶೇಷವಾಗಿದೆ. ಕಲಿಯುಗದಲ್ಲಿ ಭಾಗವತ ಶ್ರವಣ ಶ್ರೇಷ್ಠ ಮಾರ್ಗ ಎಂದ ಅವರು, ಈ ತಿಂಗಳ ಪ್ರವಚನ ಸಪ್ತಾಹದಲ್ಲಿ ಸೂರ್ಯ ವಂಶದ ಕುರಿತು ಸವಿಸ್ತಾರವಾಗಿ ತಿಳಿಸಿದರು.

ಶ್ರಾದ್ಧವನ್ನು ಅತ್ಯಂತ ಶ್ರದ್ಧೆಯಿಂದ ಮಾಡಬೇಕು ಎಂದು ಭಾಗವತದಲ್ಲಿ ನಮಗೆ ತಿಳಿದುಬರುತ್ತದೆ. ಪಿತೃದೇವತೆಗಳ, ಪಿತೃಗಳ ಸಂತುಷ್ಠಿಗಾಗಿ ನಾವು ಶ್ರಾದ್ಧವನ್ನು ಮಾಡಬೇಕು. ಇದು ನಮ್ಮ ಶಾಸ್ತ್ರಬದ್ಧ ಆಚರಣೆ ಆಗಿದ್ದು, ಶಾಸ್ತ್ರಗಳಲ್ಲಿ ತಿಳಿಸಿರುವ ಹಾಗೆಯೇ ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ರಘುವೀರಾನಂದಜೀ ಮಹಾರಾಜ, ಶ್ರೀ ಸ್ವಾಮಿ ಗುರುದೇವಚರಣಾನಂದಜೀ ಮಹಾರಾಜ, ಶ್ರೀ ಸ್ವಾಮಿ ಪ್ರೇಮರೂಪಾನಂದಜೀ ಮಹಾರಾಜ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.