ಜಿಲ್ಲೆ

ರಸ್ತೆ ಮೇಲೆ ಸಂಗ್ರಹವಾಗಿದ್ದ ಮಳೆ ನೀರು ತೆರವು

Davangere - Desk - Basavaraja P

ತಾಪಂ ಇಒ ನೇತೃತ್ವದಲ್ಲಿ ಕಾರ್ಯಾಚರಣೆ l ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ

ಸಾಸ್ವೆಹಳ್ಳಿ: ಹೋಬಳಿಯ ಹೊಸಹಳ್ಳಿ ಗ್ರಾಮ ಪಂಚಯಿತಿ ವ್ಯಾಪ್ತಿಯ ಹುರುಳೆಹಳ್ಳಿ ಗ್ರಾಮದ ಆಂಜನೇಯ ಬೀದಿಯ ರಸ್ತೆ ಮೇಲೆ ಸಂಗ್ರಹವಾಗಿದ್ದ ಮಳೆ ನೀರನ್ನು ಜೆಸಿಬಿ ಮೂಲಕ ಶನಿವಾರ ತೆರವುಗೊಳಿಸಲಾಯಿತು.

ಆಂಜನೇಯ ಬೀದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ನಿವಾಸಿಗಳು ಸಿಸಿ ರಸ್ತೆ ಮೇಲೆ ಮಣ್ಣು ಹಾಕಿದ್ದರಿಂದ ಅಲ್ಲಿ ಮಳೆ ನೀರು ಸಂಗ್ರಹವಾಗುತ್ತಿತ್ತು. ಈ ಸಂಬಂಧ ಈ ಹಿಂದೆ ಸಾಕಷ್ಟು ಬಾರಿ ತಾಲೂಕು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತೆಯರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಲ್ಲಿ ಆರೋಗ್ಯ ಜಾಗೃತಿ ಮೂಡಿಸಿದ್ದರು.

ರಸ್ತೆ ಮೇಲೆ ನಿಂತ ನೀರು ತೆರವಿಗೆ ಪ್ರಯತ್ನಪಟ್ಟರೂ ಕೆಲವರ ವಿರೋಧದಿಂದ ಸಾಧ್ಯವಾಗಿರಲಿಲ್ಲ. ಈ ಬೀದಿಯಲ್ಲಿ ಐವತ್ತಕ್ಕೂ ಹೆಚ್ಚು ಮನೆಗಳಿದ್ದು, 6.19 ಎಕರೆಯ ಈ ಜಾಗ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೂಡಲಿ ಗ್ರಾಮದ ಶೃಂಗೇರಿ ಶಾಖಾ ಮಠಕ್ಕೆ ಸೇರಿದ್ದ ಎನ್ನಲಾಗುತ್ತಿದೆ.

ಜಾಗದ ಸುತ್ತಲೂ ಸ್ಥಳೀಯರ ಜಮೀನುಗಳಿವೆ. ಈ ಬೀದಿಗೆ ಚರಂಡಿ ನಿರ್ಮಾಣ ಮಾಡಿದರೂ ಚರಂಡಿ ನೀರು ಬೀದಿಯಿಂದ ಮುಂದೆ ಸಾಗಲು ಜಾಗ ಅಭಾವದ ಕಾರಣಕ್ಕೆ ಈ ಸಮಸ್ಯೆ ಉದ್ಭವಿಸಿದೆ. ಇಲ್ಲಿಂದ 150 ಅಡಿ ದೂರದಲ್ಲಿ ತುಂಗಭದ್ರಾ ನದಿ ಹರಿಯುತ್ತಿದ್ದು, ಸ್ಥಳೀಯ ಆಡಳಿತ ಪೈಪ್‌ಗಳನ್ನು ಹಾಕಿ ಬೀದಿ ಮೇಲೆ ಬಿದ್ದ ಮಳೆಯ ನೀರು ನದಿಗೆ ಹೋಗುವಂತೆ ವ್ಯವಸ್ಥೆ ಮಾಡುವಂತೆ ಸ್ಥಳೀಯ ನಿವಾಸಿಗಳು ತಾಪಂ ಇಒಗೆ ಮನವಿ ಮಾಡಿದರು.

ಸ್ಥಳದಲ್ಲಿ ಸಾಸ್ವೆಹಳ್ಳಿ ನಾಡಕಚೇರಿಯ ಉಪತಹಸೀಲ್ದಾರ್ ಚಂದ್ರಪ್ಪ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ದಿನೇಶ್‌ಬಾಬು, ಹೊಸಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಉಮೇಶ್, ಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಅಪ್ಪಲರಾಜು, ಸದಸ್ಯರಾದ ಚಂದ್ರಪ್ಪ, ನಾಗರಾಜ್, ಪಿಡಿಒ ಎಚ್.ಎಸ್.ಶಿವಕುಮಾರ್, ಪೊಲೀಸ್ ಇಲಾಖೆಯ ಎಎಸ್‌ಐ ಎಚ್.ವಿ.ಹರೀಶ್, ಅಶೋಕ್ ರೆಡ್ಡಿ ಇದ್ದರು.

ತಾತ್ಕಾಲಿಕ ಚರಂಡಿ ನಿರ್ಮಾಣ: ಸಿಸಿ ರಸ್ತೆಯ ಮೇಲಿದ್ದ ಸಂಪೂರ್ಣ ಮಣ್ಣನ್ನು ತೆರವುಗೊಳಿಸಿದ್ದು, ಪ್ರತಿ ನಾಲ್ಕು ಮನೆಗಳ ಅಂತರದಲ್ಲಿ ನೀರು ಬೀದಿಯಿಂದ ಹೊರ ಹೋಗುವಂತೆ ತಾತ್ಕಾಲಿಕ ಚರಂಡಿಗಳನ್ನು ನಿರ್ಮಾಣ ಮಾಡಲಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ನಿಂತ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳು ಹರಡದಂತೆ ನೋಡಿಕೊಳ್ಳಿ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳೋಣ.
l ಎಚ್.ವಿ.ರಾಘವೇಂದ್ರ, ಕಾರ್ಯನಿರ್ವಹಣಾಧಿಕಾರಿ, ಹೊನ್ನಾಳಿ ತಾಪಂ.