ಸಾಸ್ವೆಹಳ್ಳಿ: ಭದ್ರಾವತಿ ತಾಲೂಕಿನ ದಿಗ್ಗೇನಹಳ್ಳಿ ಬಳಿ ಭದ್ರಾ ನಾಲಾ ಆನವೇರಿ ಶಾಖಾ ಮುಖ್ಯ ನಾಲೆಯ ಅಕ್ವಡಕ್ ದುರಸ್ತಿ ಕಾರ್ಯ ಬುಧವಾರದಿಂದ ಆರಂಭವಾಗಿದೆ. ಒಡೆದ ಅಕ್ವಡಕ್ ಅನ್ನು ಜೆಸಿಬಿ ಯಂತ್ರದ ಮೂಲಕ ತೆರವು ಮಾಡಲಾಗಿದ್ದು, ನಾಲೆಯಲ್ಲಿ ನೀರು ಹರಿಸಲು ತಾತ್ಕಾಲಿಕವಾಗಿ ಕಬ್ಬಿಣದ ಪೈಪ್ಗಳನ್ನು ಅಳವಡಿಸಲಾಗುತ್ತಿದೆ.
ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಿ, ಭದ್ರ ಕಾಲುವೆಗೆ ನೀರು ಬಿಡಲಾಗುವುದು. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಈ ಅಕ್ವಡಕ್ನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಿುಸಲು ಸಾಕಷ್ಟು ಅವಧಿ ಬೇಕಾಗುತ್ತದೆ. ಆದ್ದರಿಂದ ತಾತ್ಕಾಲಿಕವಾಗಿ ಪೈಪ್ ಅಳವಡಿಸಲಾಗುತ್ತಿದ್ದು, ಇದಕ್ಕೆಂದು 21 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ ಎಂದು ಕೆಎನ್ಎನ್ಎಲ್ ಮಲೇಬೆನ್ನೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪಿ. ಧನಂಜಯ್ ತಿಳಿಸಿದ್ದಾರೆ.
ಗೊಲ್ಲರಹಳ್ಳಿ ತಲುಪುವ ಮುಖ್ಯ ನಾಲೆ: ಡಿ.ಬಿ.ಹಳ್ಳಿಯಿಂದ ಆನವೇರಿ, ಲಿಂಗಾಪುರ, ಸಾಸ್ವೆಹಳ್ಳಿ, ಬೆನಕನಹಳ್ಳಿ ಮಾರ್ಗವಾಗಿ ಹೊನ್ನಾಳಿ ಸಮೀಪದ ಗೊಲ್ಲರಹಳ್ಳಿ ತಲುಪುವ ಭದ್ರಾ ಮುಖ್ಯ ನಾಲೆ 13.3 ಕಿಮೀ ಪಾಯಿಂಟ್ನಲ್ಲಿ ಇರುವ ಅಕ್ವಡಕ್ ಇದಾಗಿದೆ.