ಚಿಕ್ಕಮಗಳೂರು ತಾಲೂಕು ಪಿಳ್ಳೇನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಎಚ್.ಶಶಿಧರ್ ಅವರನ್ನು ಸಹ ಸದಸ್ಯರು ಅಭಿನಂದಿಸಿದರು. ಶಾರದಮ್ಮ, ಪಿ.ಡಿ.ನವೀನ್, ಪಿ.ಎನ್.ರಮೇಶ್, ನಾಗರಾಜ ನಾಯ್ಕ, ಮಹೇಶ್ವರಾಚಾರ್, ಸಾವಿತ್ರಮ್ಮ ಮತ್ತಿತರರಿದ್ದರು. 
ಜಿಲ್ಲೆ

ಪಿಳ್ಳೇನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಶಶಿಧರ್ ಅವಿರೋಧ ಆಯ್ಕೆ

ಚಿಕ್ಕಮಗಳೂರು: ತಾಲೂಕಿನ ಪಿಳ್ಳೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಬಿ.ಎಚ್.ಶಶಿಧರ್ ಸೋಮವಾರ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿಯಡಿ ಬಿ.ಎಚ್.ಶಶಿಧರ್ ಹೊರತುಪಡಿಸಿ ಬೇರೆ ಯಾವ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಎಸ್.ಬಿ.ಉಮೇಶ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಬಿ.ಎಚ್.ಶಶಿಧರ್ ಏಳು ಗ್ರಾಮಗಳನ್ನು ಒಳಗೊಂಡಿರುವ ಪಂಚಾಯಿತಿ ಅತಿಹೆಚ್ಚು ಬಯಲುಸೀಮೆ ಪ್ರದೇಶವನ್ನು ಹೊಂದಿದೆ. ಈ ಭಾಗದಲ್ಲಿ ನೀರಿಗೆ ಪ್ರಾಮುಖ್ಯತೆ ನೀಡುವ ದೃಷ್ಟಿಯಿಂದ ಕುಡಿಯುವ ನೀರು ಹಾಗೂ ಮಳೆನೀರು ಸಂಗ್ರಹಿಸುವ ಯೋಜನೆಗಳಿಗೆ ಒತ್ತು ನೀಡಲಾಗುವುದು ಎಂದರು.
ಬಹುತೇಕ ರೈತಾಪಿ ವರ್ಗವು ಈ ಭಾಗದಲ್ಲಿ ಕಾಣಸಿಗುವ ಕಾರಣ ಮೂಲಭೂತ ಸೌಲಭ್ಯ ಹಾಗೂ ಉತ್ತಮ ಫಸಲಿಗೆ ಬೇಕಾಗುವಂತಹ ಬೀಜಗಳನ್ನು ಒದಗಿಸುವುದು, ಜಮೀನಿಗೆ ನೀರಿನ ಸೌಕರ್ಯ ಸೇರಿದಂತೆ ರೈತರಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.
ಅಧಿಕಾರದ ಚುಕ್ಕಾಣಿಯಲ್ಲಿ ಜಾತ್ಯಾತೀತ ನಿಲುವುಗಳನ್ನು ಒಳಗೊಂಡು ಗ್ರಾಪಂ ವ್ಯಾಪ್ತಿಯ ಬಡವರು, ಮಧ್ಯಮ ವರ್ಗ ಹಾಗೂ ದೀನದಲಿತರ ಏಳಿಗೆಗೆ ನಿಷ್ಟೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತೇನೆ. ಇದಕ್ಕೆ ಸರ್ವ ಸದಸ್ಯರ ಸಹಕಾರ ಅತಿ ಮುಖ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಶಾರದಮ್ಮ, ಸದಸ್ಯರಾದ ಪಿ.ಡಿ.ನವೀನ್, ಪಿ.ಎನ್.ರಮೇಶ್, ನಾಗರಾಜನಾಯ್ಕ್, ಮಹೇಶ್ವರಾಚಾರ್, ಸಾವಿತ್ರಮ್ಮ, ಭಾಗ್ಯ, ಪವಿತ್ರ, ಎಸ್.ಸೌಂದರ್ಯ, ಗ್ರಾಮಸ್ಥರಾದ ರಾಜಣ್ಣ, ಮಲ್ಲೇಶಪ್ಪ, ಕರಿಬಸವೇಗೌಡ, ಮಹೇಶ್ವರಪ್ಪ, ಜಯಶೇಖರ್ ಮತ್ತಿತರರಿದ್ದರು.