ಸಾಸ್ವೆಹಳ್ಳಿ: ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ತುಂಗಭದ್ರಾ ನದಿಯಲ್ಲಿ ಏತ ನೀರಾವರಿಗೆ ಯೋಜನೆಗೆ ಸಂಬಂಧಿಸಿದ ಜಾಕ್‌ವೆಲ್, ಪಂಪ್‌ಹೌಸ್, ನದಿಗೆ ಅಡ್ಡಲಾಗಿ ವೇರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ತುಂಗಭದ್ರಾ ನದಿ ನೀರನ್ನು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಕೆಲ ತಾಲೂಕುಗಳ ಕೆರೆಗೆ ನೀರು ತುಂಬಿಸುವ ಮಹತ್ವದ ಯೋಜನೆಯ ಪೈಪ್‌ಲೈನ್ ಕಾರ್ಯ ಪ್ರಗತಿಯಲ್ಲಿದೆ.
ಈ ಯೋಜನೆ ಅವಳಿ ಜಿಲ್ಲೆಗಳ ಬಹುತೇಕ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಹೆಚ್ಚಿಸಿ ರೈತರ ಕೊಳವೆಬಾವಿಗಳು ಹಾಗೂ ಕುಡಿವ ನೀರಿನ ಕೊಳವೆಬಾವಿಗಳ ಸುಧಾರಣೆ ಮಾಡುವುದಾಗಿದ್ದು, ಮಳೆಗಾಲ ಪ್ರಾರಂಭವಾಗುವಷ್ಟರಲ್ಲಿ ಈ ಕಾಮಗಾರಿ ಸಂಪೂರ್ಣ ಮುಗಿಯುವ ನಿರೀಕ್ಷೆ ಇದೆ ಎಂದು ಯೋಜನೆಯ ಗುತ್ತಿಗೆದಾರ, ಜಿವಿಪಿಆರ್ ಕಂಪನಿಯ ಹಿರಿಯ ಯೋಜನಾ ವ್ಯವಸ್ಥಾಪಕ ನರೇಂದ್ರ ತಿಳಿಸಿದರು.
ಕರ್ನಾಟಕ ನೀರಾವರಿ ನಿಗಮ ಲಿ.(ಕೆಎನ್‌ಎನ್‌ಎಲ್) ಅಧೀಕ್ಷಕ ಅಭಿಯಂತರ ರಮೇಶ್, ಸಹಾಯಕ ಅಭಿಯಂತರ ರಾಜೇಂದ್ರ ಪ್ರಸಾದ್, ಕರಿಯಪ್ಪ, ಹರೀಶ್, ಸ್ಥಳ ಪರಿಶೀಲನೆ ನಡೆಸಿದರು.