ಜಿಲ್ಲೆ

ಅಚ್ಚಳಿಯದೆ ಉಳಿದಿರುವ ಸರ್ವಜ್ಞರ ತ್ರಿಪದಿ: ಜಿಲ್ಲಾಧಿಕಾರಿ ಡಾ.ಕುಮಾರ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ವಿದ್ಯಾವಂತರಿಂದ ಹಿಡಿದು ಅವಿದ್ಯಾವಂತರವರೆಗೂ ಪರಿಚಿತವಾದ ಕವಿ ಎಂದರೆ ಸರ್ವಜ್ಞ. ಇದಕ್ಕೆ ಕಾರಣ ಅವರು ಸುಲಭವಾಗಿ ಹಾಗೂ ಜನರಿಗೆ ಅರ್ಥವಾಗುವ ರೀತಿ ರಚಿಸಿರುವ ತ್ರಿಪದಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ವಜ್ಞರ ತ್ರಿಪದಿಯ ಮೌಲ್ಯ ಎಷ್ಟೆಂದರೆ ಜನರು ಇಂದಿಗೂ ತ್ರಿಪದಿಗಳನ್ನು ಮೆಲುಕು ಹಾಕುತ್ತಾರೆ. ಕೇವಲ ಮೂರು ಸಾಲಿನ ತ್ರಿಪದಿಯಲ್ಲಿ ಬದುಕಿನ ಅರ್ಥವನ್ನು ಸರಳವಾಗಿ ತಿಳಿಸುವ ಅವರ ಚಿಂತನೆ ನಿಜಕ್ಕೂ ಶ್ಲಾಘನೀಯ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸರ್ವಜ್ಞ ಅರಿಯದ ವಿಷಯವಿಲ್ಲ. ಬದುಕಿನ ಪ್ರತಿಘಟ್ಟವನ್ನು ತಮ್ಮ ತ್ರಿಪದಿಯ ಮೂಲಕ ತಿಳಿಸಿದ್ದಾರೆ. ಅವರ ತ್ರಿಪದಿಯ ಮೌಲ್ಯ, ಉದ್ದೇಶ, ಆದರ್ಶವನ್ನು ನಾವು ಇಂದಿಗೂ ಪಾಲಿಸಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿಯೇ ಶ್ರೇಷ್ಟವಾದ ಯುಗ ಎಂದರೆ 16ನೇ ಶತಮಾನ. ಆ ಒಂದು ಶತಮಾನದ ಶ್ರೇಷ್ಟ ವಚನಕಾರ ಸರ್ವಜ್ಞ ಅವರು ಎಂದರೆ ತಪ್ಪಾಗುವುದಿಲ್ಲ. ತಮ್ಮ ತ್ರಿಪದಿ ಮೂಲಕ ಸಾಹಿತ್ಯಕ್ಕೆ ಮತ್ತು ಸಮಾಜಕ್ಕೆ ಅವರು ನೀಡಿರುವ ಕೊಡುಗೆ ನಿಜಕ್ಕೂ ಅಪಾರ. ಅವರ ವಚನದ ಉದ್ದೇಶ ಆಲೋಚನೆಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಮ್ಮ ಮುಂದಿನ ಪೀಳಿಗೆಯಲ್ಲೂ ಇವರ ಬಗ್ಗೆ ಹೆಚ್ಚಾಗಿ ಅರಿವು ಮೂಡಿಸಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಟಿ.ಎನ್.ಚಿಕ್ಕವೀರಯ್ಯ ಉಪನ್ಯಾಸ ನೀಡಿದರು. ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಕುಂಬಾರರ ಸಂಘದ ಅಧ್ಯಕ್ಷ ಎಂ.ಕೃಷ್ಣ ಇತರರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 16 ಜನರನ್ನು ಸನ್ಮಾನಿಸಲಾಯಿತು.