ಜಿಲ್ಲೆ

ಜೀವನಾನುಭವ ವಚನಕ್ಕಿಳಿಸಿದ ಕವಿ ಸರ್ವಜ್ಞ

ಉಡುಪಿ: ಸರ್ವಜ್ಞ ಎಂದರೆ ಎಲ್ಲವನ್ನು ಬಲ್ಲವನು ಎನ್ನುವ ಅರ್ಥ ಇದೆ. ತನ್ನ ಜೀವನ ಅನುಭವಗಳ ಮೂಲಕ ವಚನಗಳನ್ನು ರಚಿಸಿದ ಕವಿ ಸರ್ವಜ್ಞ. ಸಮಾಜದ ಅಂಕು, ಡೊಂಕುಗಳ ತಿದ್ದಲು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತ್ರಿಪದಿಗಳನ್ನು ರಚಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್​. ಹೇಳಿದರು.

ನಗರದ ಅಜ್ಜರಕಾಡು ಡಾ.ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸತಿ ಇಲಾಖೆ ಮತ್ತು ಉಡುಪಿ ಜಿಲ್ಲಾ ಕುಲಾಲ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್​. ಮಾತನಾಡಿ, ಸಮಾಜದ ಬಡತನ, ಲಿಂಗ ತಾರತಮ್ಯ, ಅನಕ್ಷರತೆಯನ್ನು ಹೋಗಲಾಡಿಸಿ ಸುಸ್ಥಿರ ಸಮಾಜ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶೇಖರ ಕುಲಾಲ್​ ಕವಿ ಸರ್ವಜ್ಞ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್​ ಶೆಟ್ಟಿ ಎಸ್​. ಅಧ್ಯಕ್ಷತೆ ವಹಿಸಿದ್ದರು. ಅಪರ ಪೊಲೀಸ್​ ವರಿಷ್ಠ್ಠಾಧಿಕಾರಿ ಸಿದ್ದಲಿಂಗಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಪೆರ್ಡೂರಿನ ಕುಲಾಲ ಸಂಘದ ಅಧ್ಯಕ್ಷ ಕೃಷ್ಣಪ್ಪ ಕುಲಾಲ್​, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ನಿಕೇತನ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ವಿದ್ಯಾರ್ಥಿನಿ ಚೈತ್ರಾ ನಿರೂಪಿಸಿ, ಗಣೇಶ್​ ಕುಲಾಲ್​ ವಂದಿಸಿದರು.