ಜಿಲ್ಲೆ

ಹುಬ್ಬಳ್ಳಿ ಗಣೇಶೋತ್ಸವಕ್ಕೆ ಸಂಪೂರ್ಣ ಸಹಕಾರ, ಪೊಲೀಸ್ ಆಯುಕ್ತ ಶಶಿಕುಮಾರ

Dharwada - Basavaraj Idli

ಹುಬ್ಬಳ್ಳಿ: ಅವಳಿನಗರದಲ್ಲಿ ಆಚರಿಸಲಾಗುವ ಅದ್ದೂರಿ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಪ್ರತಿ ವರ್ಷದಂತೆ ಎಲ್ಲ ಸಹಕಾರ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.

ನವನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ನಿಯೋಗದೊಂದಿಗೆ ಚರ್ಚಿಸಿದ ಅವರು, ಶಾಂತಿ, ಏಕತೆ ಮನೋಭಾವದೊಂದಿಗೆ ಭಾವೈಕ್ಯದಿಂದ ಹಬ್ಬ ಆಚರಿಸುತ್ತ ಬರಲಾಗಿದೆ. ಈ ವರ್ಷವೂ ನಾಡಿಗೆ ಮಾದರಿಯಾಗುವಂತೆ ಪ್ರೀತಿಯಿಂದ ಹಬ್ಬ ಆಚರಿಸಿರಿ ಎಂದರು.

ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, 11 ದಿನಗಳ ಕಾಲ ಪ್ರತಿಷ್ಠಾಪಿಸುವ ಶ್ರೀ ಗಣೇಶ ದರ್ಶನಕ್ಕೆ ಬರುವ ಭಕ್ತರಿಗೆ ಸಂಚಾರಕ್ಕೆ ಯಾವುದೇ ಅಡೆತಡೆ ಆಗದಂತೆ ಪಾರ್ಕಿಂಗ್ ವ್ಯವಸ್ತೆ, ಜನಸಂದಣಿ ನಿಯಂತ್ರಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು. ಮೆರವಣಿಗೆ ವೇಳೆ ಹಾಗೂ ಬಡಾವಣೆಗಳಲ್ಲಿ ಆಚರಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ಕೊಡಬೇಕು. ಹೊಸೂರು, ಇಂದಿರಾಗಾಜಿನ ಮನೆ ಆವರಣದಲ್ಲಿರುವ ವಿಸರ್ಜನಾ ಬಾವಿಗಳಿಗೆ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು ಎಂದು ಮನವಿ ಮಾಡಿದರು.

ಮಹಾಮಂಡಳದ ಅಲ್ತಾಫ ಕಿತ್ತೂರ, ಸಿದ್ದಣ್ಣ ಅಂಗಡಿ, ಆರ್.ಎಫ್. ಕರಕಣ್ಣವರ, ಸಂಗೀತಾ ಇಜಾರದ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ರೋಹನ ಗೋಂದಕರ, ಅನಿಲ ಕವಿಶೆಟ್ಟಿ, ಎಂ.ಎಂ. ಡಂಬಳ, ಅರುಣ ಹಚಡದ ಮಾತನಾಡಿ, ಧ್ವನಿವರ್ಧಕ ಬಳಕೆ ಸಮಯ ಸಡಿಲಿಸಬೇಕು, ಮಧ್ಯರಾತ್ರಿವರೆಗೂ ಪುಟ್ಟ ಚಹಾ ಅಂಗಡಿಗಳಿಗೆ ಅವಕಾಶ ಕೊಡಬೇಕು, ಸಮಿತಿಯವರು ನಡೆಸುತ್ತಿರುವ ಅನ್ನ ದಾಸೋಹಕ್ಕೆ ಸಹಕಾರ ನೀಡಬೇಕೆಂದು ಕೋರಿದರು. ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ನಿರ್ವಹಿಸಿದರು.