ಜಿಲ್ಲೆ

ಸಮಾನತೆ ಸಾರುವ ಸರ್ವಜ್ಞನ ವಚನ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಬಣ್ಣನೆ

reportermys

ಮಂಡ್ಯ: ತ್ರಿಪದಿ ಬ್ರಹ್ಮ ಸರ್ವಜ್ಞ ಅವರ ವಚನಗಳಲ್ಲಿ ಬದುಕಿನ ಸತ್ಯದ ಜತೆಗೆ ಸಾಮಾಜಿಕ ಸಮಾನತೆಯ ಸಾರವಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಬಣ್ಣಿಸಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಸಂತಕವಿ ಸರ್ವಜ್ಞ ಜಯಂತ್ಯುತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು. ಆಧುನಿಕ ವೇಗದ ಜಗತ್ತಿನಲ್ಲಿ ಸರ್ವಜ್ಞರ ವಚನಗಳು ಆದರ್ಶವಾಗಿವೆ ಎಂದರು.

ಇಂದಿನ ಯಾಂತ್ರಿಕ ಬದುಕಿನಲ್ಲಿ ದೀರ್ಘಾವಧಿಯ ಸಾಹಿತ್ಯವನ್ನು ಓದಿ ಬದುಕನ್ನು ಬದಲಾಯಿಸಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಆದರೆ, ಸರ್ವಜ್ಞ, ಬಸವಣ್ಣನಂತಹ ವಚನಕಾರರ ಸರಳ ವಚನಗಳಿಂದ ಬದುಕನ್ನು ತಿದ್ದಿಕೊಳ್ಳುವುದು ಸುಲಭದ ಮಾರ್ಗವಾಗಿದೆ. ಯಾವ ಸಾಹಿತ್ಯ ಸರಳವಾಗಿ, ಸಹಜವಾಗಿ ಜನಸಾಮಾನ್ಯರಿಗೆ ಅರ್ಥವಾಗುತ್ತದೋ ಅದು ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತದೆ. ಬಹುಕಾಲ ಉಳಿಯುತ್ತದೆ. ಅಂತಹ ವಚನಗಳ ರಚನೆಯಲ್ಲಿ ಸರ್ವಜ್ಞರ ಪಾತ್ರ ಅಗಾಧವಾದುದು ಎಂದು ಬಣ್ಣಿಸಿದರು.

ಸರ್ವಜ್ಞರ ಪ್ರಾಧಿಕಾರವನ್ನು ಒಂದು ಪ್ರದೇಶಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ, ಅದನ್ನು ನಾಡಿನ ಉದ್ದಗಲಕ್ಕೂ ವಿಸ್ತರಿಸಬೇಕು. ಸರ್ವಜ್ಞ ಪ್ರಾಧಿಕಾರದ ಬೆಳವಣಿಗೆಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಬೇಕು. ಸರ್ವಜ್ಞನ ಕುಲವರ್ಗದ ಆರ್ಥಿಕ ಬಲವರ್ಧನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ್ ಮಾತನಾಡಿ, ತಮಿಳುನಾಡಿನಲ್ಲಿ ಸರ್ವಜ್ಞ ಪ್ರತಿಮೆ ಹಾಗೂ ಕರ್ನಾಟಕದಲ್ಲಿ ತಿರುವಳ್ಳವರ್ ಪ್ರತಿಮೆ ಸ್ಥಾಪಿಸುವ ಮೂಲಕ ಎರಡು ಭಾಷೆಗಳ ನಡುವೆ ಸಾಮರಸ್ಯ ಮೂಡಿಸುವ ಪ್ರಯತ್ನ ನಡೆದಿದೆ. ಅದೇ ರೀತಿ ಸರ್ವಜ್ಞನ ವಚನಗಳಲ್ಲಿ ಸಮಾಜವನ್ನು ಸರಿದಾರಿಗೆ ನಡೆಸುವ ಪ್ರಯತ್ನಗಳು ನಡೆದಿವೆ ಎಂದರು.

ಕುಂಬಾರರ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖಂಡರಾದ ಕೆರಗೋಡು ವೆಂಕಟೇಶ್, ಹಾಲಹಳ್ಳಿ ಪುಟ್ಟಸ್ವಾಮಿ, ಕಾಂತರಾಜು, ಟಿ.ಎಲ್.ನಾಗರಾಜು, ಪ್ರದೀಪ್ ಯಲಿಯೂರು, ಬಿ.ಎಸ್.ಅನುಪಮಾ ಇತರರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವವರನ್ನು ಸನ್ಮಾನಿಸಲಾಯಿತು.