ಜಿಲ್ಲೆ

ಸರ್ವಧರ್ಮ ಭಾವೈಕ್ಯ ಕೇಂದ್ರ ಇಂಚಗೇರಿ ಮಠ

ಸೋಮನಾಥ ರೆಡ್ಡಿ

ಉಪ್ಪಿನಬೆಟಗೇರಿ: ಕರ್ನಾಟಕ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ ವಿಜಯಪುರ ಜಿಲ್ಲೆ ಶ್ರೀಕ್ಷೇತ್ರ ಇಂಚಗೇರಿ ಮಠವು ಸರ್ವಧರ್ಮ ಭಾವೈಕ್ಯ ಕೇಂದ್ರವಾಗಿದೆ ಎಂದು ದೊಡವಾಡ ಗ್ರಾಮದ ಶಂಕ್ರಪ್ಪ ಮಹಾರಾಜರು ಹೇಳಿದರು.

ಚಡಚಣ ತಾಲೂಕಿನ ಇಂಚಗೇರಿ ಮಠದಲ್ಲಿ ನವೆಂಬರ್ 2ರಂದು ಜರುಗುವ ಕ್ರಾಂತಿಯೋಗಿ ಶ್ರೀ ಮಾಧವಾನಂದ ಪ್ರಭೂಜಿಯವರ ಜಯಂತಿಯಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ನಗರದಿಂದ ಹೊರಟಿರುವ ದಿಂಡಿ ಪಾದಯಾತ್ರೆಯ ನೇತೃತ್ವವಹಿಸಿ ಶುಕ್ರವಾರ ಮಾರ್ಗ ಮದ್ಯೆ ಉಪ್ಪಿನಬೆಟಗೇರಿಗೆ ಆಗಮಿಸಿದಾಗ ಧರ್ಮ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ದುಂಡಪ್ಪ ಮಹಾರಾಜರು ಮಾತನಾಡಿ, ಜಾತ್ಯತೀತ ಪರಂಪರೆ ಹೊಂದಿರುವ ಇಂಚಗೇರಿ ಮಠದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮ ಭಾವೈಕ್ಯ ಸಾರುತ್ತದೆ ಎಂದರು.

ಶೆಟ್ಟೆಪ್ಪ ಮಹಾರಾಜರು ಮಾತನಾಡಿ, ಶ್ರೀ ಮಾಧವಾನಂದರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದೇಶಕ್ಕಾಗಿ ಜೈಲು ವಾಸ ಅನುಭವಿಸಿದ್ದರು. ನಂತರ ಗಿರಿಮಲ್ಲೇಶ್ವರ ಮಹಾರಾಜರ ಶಿಷ್ಯರಲ್ಲಿ ಗುರುತಿಸಿಕೊಂಡು ಇಂಚಗೇರಿಮಠದ ಪೀಠ ಅಲಂಕರಿಸಿದರು. ಜಾತಿಯ ಪಿಡುಗು ಹೋಗಲಾಡಿಸಲು 18 ಸಾವಿರ ಅಂತರ್ಜಾತಿ ವಿವಾಹ ಮಾಡುವ ಮೂಲಕ ಭಾವೈಕ್ಯ ಸಾರಿದ್ದರು. ಅವರ ಮಾರ್ಗದಲ್ಲಿ ನಡೆಯುತ್ತಿರುವ ಶ್ರೀ ರೇವಣಸಿದ್ಧೇಶ್ವರ ಮಹಾರಾಜರು ಸಾಮೂಹಿಕ ಬೇಸಾಯ, ಸಹಪಂಕ್ತಿ ಭೋಜನದ ಮೂಲಕ ಸಾಮರಸ್ಯಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದರು.

ಶಂಕರ ಓರಣಕರ, ಶ್ರೀಶೈಲ ಗೌರಿಮಠ, ವಿನೋಬಾ ಓರಣಕರ, ಆದಿತ್ಯ ಈಸರಗೊಂಡ, ಸಾವಿತ್ರಿ ಓರಣಕರ, ಫಕೀರಪ್ಪ ಸವಣೂರ, ಕುಮಾರ ಈಸರಗೊಂಡ, ಪ್ರಭು ವರೂರ, ಕಮಲಾಬಾಯಿ ಓರಣಕರ, ಲಕ್ಷ್ಮಣ ಮೇದಾರ, ರಮೇಶ ಓರಣಕರ, ಮಹಮ್ಮದ ಅಸ್ಲಂ ಮುಲ್ಲಾ, ತುಕಾರಾಮ ಓರಣಕರ, ಚನಬಸಪ್ಪ ಕರೀಕಟ್ಟಿ, ಗೀತಾ ಓರಣಕರ, ಗುರು ಮುರಗೋಡ, ಗಣೇಶ ಅರಳಿಕಟ್ಟಿ, ರವೀಂದ್ರ ಓರಣಕರ, ಬೈಲಪ್ಪ ಹಡಪದ ಇತರರಿದ್ದರು.