ತಾಳಿಕೋಟೆ: ಪಟ್ಟಣದ ಸೌಂದರ್ಯ ಅಭಿವೃದ್ಧಿಗಾಗಿ ಪುರಸಭೆಯ ವತಿಯಿಂದ ಕಳೆದ ನ.12 ರಿಂದ 14 ರವರೆಗೆ ನಡೆಸಿದ ಫುಟ್‌ಪಾತ್ ಮತ್ತು ಸಾರ್ವಜನಿಕ ಸ್ಥಳ ಅತಿಕ್ರಮಿಸಿಕೊಂಡ ಡಬ್ಬಾ ಅಂಗಡಿ, ಗೂಡಂಗಡಿಗಳ ತೆರವು ಕಾರ್ಯಚರಣೆ ವಿರೋಧಿಸಿ ಶ್ರೀ ಹರಳಯ್ಯ (ಸಮಗಾರ) ಸಮಾಜದವರು ರಸ್ತೆಯ ಮೇಲೆ ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಕೂಡಲೇ ತೆರವುಗೊಳಿಸದಿದ್ದರೆ ಪಟ್ಟಣದ ಎಲ್ಲ ನಾಗರಿಕರ ಸಹಕಾರದೊಂದಿಗೆ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ ಎಂದು ಪುರಸಭಾ ಸದಸ್ಯ ಮುತ್ತಣ್ಣ ಚಮಲಾಪೂರ ಹೇಳಿದರು.
ಅನಧಿಕೃತ ಧರಣಿ ಸತ್ಯಾಗ್ರಹ ತೆರವು ಕುರಿತು ಹಾಗೂ ನಿವೃತ್ತ ಎಸ್‌ಪಿ ಎಸ್.ಬಿ.ಕಟ್ಟಿಮನಿ ಅವರನ್ನು ಯೂಟ್ಯೂಬ್ ಚಾನಲ್ ಹೆಸರಿನ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕರೆಯಲಾದ ಸರ್ವ ಸಮಾಜದವರು, ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಧರಣಿ ನಿರತರನ್ನು ತೆರವುಗೊಳಿಸುವಂತಹ ಕಾರ್ಯ ಪೊಲೀಸ್ ಅಧಿಕಾರಿಗಳು ಮಾಡಬೇಕೆಂದು 3 ದಿನ ಗಡುವು ನೀಡಲಾಗಿದೆ ಎಂದರು.
ಹಿರಿಯ ಮುಖಂಡ ಕಾಶಿನಾಥ ಮುರಾಳ ಮಾತನಾಡಿ, ಪಟ್ಟಣದ ಯಾವುದೇ ಹಿರಿಯ ನಾಗರಿಕರ ಹೆಸರಿಗೆ ತೇಜೋವಧೆಯಾದರೆ ನಾವ್ಯಾರು ಸುಮ್ಮನೆ ಇರುವುದಿಲ್ಲ. ಎಸ್.ಬಿ.ಕಟ್ಟಿಮನಿ ಅವರ ಹೆಸರು ಕೆಡಿಸಲು ಮುಂದಾದವರ ವಿರುದ್ಧ ಶಿಸ್ತು ಕ್ರಮವಾಗಬೇಕು. ರಸ್ತೆಯ ಮೇಲೆ ಧರಣಿಗೆ ಎಲ್ಲಿಯೂ ಅವಕಾಶವಿಲ್ಲ ಎಂದರು.
ಪುರಸಭಾ ಸದಸ್ಯರಾದ ಪರಶುರಾಮ ತಂಗಡಗಿ, ಅಣ್ಣಾಜಿ ಜಗತಾಪ, ಪುರಸಭಾ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಮುಖಂಡರಾದ ಸುರೇಶ ಹಜೇರಿ, ಎಂ.ಎಸ್.ಸರಶೆಟ್ಟಿ, ಕಾಶಿರಾಯ ಮೋಹಿತೆ, ಜೈಭೀಮ ಮುತ್ತಗಿ, ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಲತೀಪ ಬೀಳಗಿ ಮಾತನಾಡಿದರು. ಪಿಎಸ್‌ಐ ಆರ್.ಎಸ್.ಭಂಗಿ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಆಧರಿಸಿ 3 ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ಚೋರಗಸ್ತಿ, ಸದಸ್ಯರಾದ ಎಂ.ಕೆ.ಪಟ್ಟಣಶಟ್ಟಿ, ಮುಸ್ತಾ ಚೌಧರಿ, ಕಾಶಿನಾಥ ಸಜ್ಜನ, ರಥನಸಿಂಗ್ ಕೊಕಟನೂರ, ಬಸನಗೌಡ ಮಾಲಿಪಾಟೀಲ, ಪ್ರಕಾಶ ಹಜೇರಿ, ಪ್ರಕಾಶ ಕಶೆಟ್ಟಿ, ಈಶ್ವರ ಹೂಗಾರ, ವಿಷ್ಣು ಸಾಳುಂಕೆ, ಮಂಜುನಾಥ ಶೆಟ್ಟಿ, ಸಂಭಾಜಿ ಡಿಸಲೆ, ಯಾಜ ಉತ್ನಾಳ, ವಿಠ್ಠಲ ಮೋಹಿತೆ, ಗೋವಿಂದಸಿಂಗ್ ಗೌಡಗೇರಿ, ಸಜ್ಜನಸಾಹುಕಾರ ಬ್ಯಾಲ್ಯಾಳ, ರವಿ ಕಟ್ಟಿಮನಿ, ದಸ್ತಗೀರ ಕೆಂಭಾವಿ, ಮಹಿಬೂಬ ಲಾಹೋರಿ, ರಾಮಪ್ಪ ಕಟ್ಟಿಮನಿ, ಭೀಮನಗೌಡ ಪಾಟೀಲ, ಸಂಜೀವ ಬರೆದೇನಾಳ, ಕಲ್ಲನಗೌಡ ಪಾಟೀಲ, ಸುಭಾಸ ಹೂಗಾರ, ಗುಂಡು ಜಗತಾಪ, ಗೋಪಾಲ ಕಟ್ಟಿಮನಿ, ತಿಪ್ಪಣ್ಣ ಸಜ್ಜನ, ನದೀಮ ಕಡು ಇತರರಿದ್ದರು.