ಜಿಲ್ಲೆ

ಮಾ.14ರಂದು ಯೋಗಿ ನಾರೇಯಣ ಜಯಂತ್ಯುತ್ಸವ: ಸರ್ವ ಬಣಜಿಗ(ಬಲಿಜ)ರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಮೋಹನ್‌ಕುಮಾರ್ ಮಾಹಿತಿ

ಮಂಡ್ಯ: ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮಾ.14ರಂದು ಭಕ್ತಿ ಪಂಥದ ಪ್ರತಿಪಾದಕ, ತ್ರಿಕಾಲ ಜ್ಞಾನಿ ಹಾಗೂ ಸಮಾಜ ಸುಧಾಕರ ಯೋಗಿ ನಾರೇಯಣ ಯತೀಂದ್ರ(ಕೈವಾರ ತಾತಯ್ಯ) ಜಯಂತ್ಯುತ್ಸವ ಆಯೋಜಿಸಲಾಗಿದೆ ಎಂದು ಸರ್ವ ಬಣಜಿಗ(ಬಲಿಜ)ರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಮೋಹನ್‌ಕುಮಾರ್ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ವ ಬಣಜಿಗ(ಬಲಿಜ)ರ ಸಂಘದ ಸಹಯೋಗದಲ್ಲಿ ಅಂದು ಬೆಳಗ್ಗೆ 11ಗಂಟೆಗೆ ಆಯೋಜಿಸಿರುವ ಸಮಾರಂಭವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಹಾಯಕ ಪ್ರಾಧ್ಯಾಪಕ ಡಾ.ಬಿ.ರಮೇಶ್ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಬಲಿಜ ಸಮುದಾಯದ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಉನ್ನತ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಗುವುದು ಎಂದು ವಿವರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್.ಪ್ರಶಾಂತ್, ಖಜಾಂಚಿ ಎಂ.ವಿ.ಸ್ವರ್ಣಕುಮಾರ್, ನಿರ್ದೇಶಕರಾದ ಕೃಷ್ಣಶೆಟ್ಟಿ, ಕೇಶವಮೂರ್ತಿ, ಎಂ.ಎಸ್.ನಾಗೇಂದ್ರ ಇದ್ದರು.