ಮಂಡ್ಯ: ಶಿಥಿಲಗೊಂದಿರುವ ಪಾರಂಪರಿಕ ಶಾಲೆಗಳು ಉಳಿಯಬೇಕು. ಇದರ ಆಧುನೀಕರಣಕ್ಕೆ ಸಹಕಾರ ಹೆಚ್ಚು ಸಿಗಬೇಕು. ಶೈಕ್ಷಣಿಕ ಸಲಕರಣೆಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ನೆರವಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಹೇಳಿದರು.
ನಗರದ ಆರ್‌ಪಿ ರಸ್ತೆಯ ಸಮೀಪವಿದ ಬನ್ನೂರು ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆಧುನೀಕರಣದ ಜವಾಬ್ದಾರಿಯನ್ನು ಕಾರ್ಮಿಕ ಚಾರಿಟೆಬಲ್ ಟ್ರಸ್ಟ್‌ನವರು ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಭೇಟಿ ನೀಡಿ ಮಾತನಾಡಿದರು.
ಈ ಶಾಲೆಯಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಸೇರಿದಂತೆ ಉನ್ನತ ರಾಜಕಾರಣಿಗಳು ಓದಿರುವ ಇತಿಹಾಸವಿದೆ. ನೂರಾರು ವಿದ್ಯಾರ್ಥಿಗಳು ಅಧ್ಯಯನ ಮಾಡಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಉನ್ನತೀಕರಣಕ್ಕೆ ಚಾಲನೆ ನೀಡಿರುವುದು ಸಂತೋಷ ತರಿಸಿದೆ. ಸ್ಥಳೀಯವಾಗಿ ದಾನಿಗಳು ಮುಂದೆ ಬಂದು ಆಧುನೀಕರಣಕ್ಕೆ ಸಹಕರಿಸುತ್ತಿದ್ದಾರೆ. ಹಾಗಾಗಿ ಈ ಒಡಂಬಡಿಕೆಯಿಂದ ಶಾಲಾ ದುರಸ್ತಿ ಕಾರ್ಯ ನಡೆಯಲಿದೆ ಎಂದರು.
ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಈ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ಶಾಲೆಗೆ ಅದರದೇ ಆದ ಇತಿಹಾಸವಿದೆ. ಆಗಿನ ಕಾಲದಲ್ಲಿಯೇ ಶಾಲೆ ಉತ್ತಮ ಹೆಸರು ಮಾಡಿತ್ತು. ಈಗ ಶಾಲೆಗೆ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವ ಕ್ರಮ ಸರಿಯಿದೆ. ಕಾರ್ಮಿಕ ಚಾರಿಟಬಲ್ ಟ್ರಸ್ಟ್‌ನವರು ದತ್ತು ಪಡೆದು ನವೀಕರಿಸುತ್ತಿರುವುದು ಸಂತೋಷದಾಯಕ ಎಂದು ವಿವರಿಸಿದರು.
ಕಾರ್ಮಿಕ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸಂತೋಷ್ ಮಾತನಾಡಿ, ಮಕ್ಕಳನ್ನು ದಾಖಲು ಮಾಡಿಕೊಳ್ಳುವುದು ಹಾಗೂ ಶಿಕ್ಷಕರನ್ನು ನೇಮಿಸಿಕೊಳ್ಳುವವರೆಗೂ ನಾವೇ ಎಲ್ಲ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೇವೆ. ನಗರದ ಹೃದಯ ಭಾಗದಲ್ಲಿರುವ ಇತಿಹಾಸ ಹೊಂದಿದ ಶಾಲೆಯ ಆಧುನೀಕರಣಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಜಿ.ಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಡಿಡಿಪಿಐ ಜವರೇಗೌಡ, ಬಿಇಒ ಚಂದ್ರಕಾಂತಾ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಮುಖ್ಯ ಶಿಕ್ಷಕಿ ಗಾಯತ್ರಿ, ಸ್ಥಳೀಯ ಮುಖಂಡ ಬೆಂಜಮಿನ್ ಥಾಮಸ್, ಶೋಭಾ, ಸುಮಿತ್ರಾ, ಉಮೇಶ್ ಇತರರಿದ್ದರು.