ಚಕ್ರವರ್ತಿ ವಿ.ಸರ್ಜಾಪುರ
ರಾಜಧಾನಿ ಬೆಂಗಳೂರಿನ ಆಗ್ನೇಯ ದಿಕ್ಕಿನಲ್ಲಿರುವ ಸರ್ಜಾಪುರ ಹೈಟೆಕ್ ಸಿಟಿಯಾಗಿ ಬೆಳೆಯುತ್ತಿದೆ, ಆದರೆ ಹದಗೆಟ್ಟ ರಸ್ತೆ ಹಾಗೂ ಟ್ರಾಫಿಕ್ ಕಿರಿಕಿರಿ ಇಲ್ಲಿನ ನಿವಾಸಿಗಳನ್ನು ಹೈರಾಣಾಗಿಸಿದೆ. ಈ ಭಾಗದಲ್ಲಿ ಇನ್ಫೋಸಿಸ್, ವಿಪ್ರೋ ಮತ್ತಿತರ ಮಲ್ಟಿನ್ಯಾಷನಲ್ ಕಂಪನಿಗಳು ಶಾಖೆಗಳನ್ನು ತೆರೆಯಲು ಉತ್ಸುಕತೆ ತೋರುತ್ತಿವೆ. ಆದರೆ ಇಲ್ಲಿನ ರಸ್ತೆ ಅವ್ಯವಸ್ಥೆ ನೋಡಿದರೆ ಕಂಪನಿಗಳು ಇತ್ತ ತಲೆಹಾಕುವುದೂ ಅನುಮಾನ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ವಾಹನಗಳ ಸಂಚಾರವಿರುವ ಸರ್ಜಾಪುರ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ, ವರ್ಷಕ್ಕೆ 25 ರಿಂದ 30 ಮಂದಿ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡರೆ, ಇನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದಾಖಲೆ ಇದೆ.
ಇಕ್ಕಟ್ಟಿನ ರಸ್ತೆಗಳಲ್ಲಿ ಜಾಮ್: ಸೌಖ್ಯ ರಸ್ತೆ, ಡಾಬಸ್ ಪೇಟೆ, ಮಾಲೂರು, ನರಸಪುರ ಸೇರಿ ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿರುವ ಬೃಹತ್ ಪ್ರಮಾಣದ ಕಂಪನಿಗಳಿಗೆ ಸರಕು ಸಾಗಣೆ ವಾಹನಗಳು ಸರ್ಜಾಪುರ ಮಾರ್ಗವಾಗಿ ಸಂಚರಿಸುತ್ತವೆ, ಸರ್ಜಾಪುರ ಪ್ರವೇಶ ಮಾಡುತ್ತಿದ್ದಂತೆ ಇಕ್ಕಟ್ಟಿನ ರಸ್ತೆಗಳಿಂದಾಗಿ ಕಾರು, ಬೈಕ್, ಆಟೋ, ಬಸ್‌ಗಳು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ನಿಲ್ಲುವಂತಾಗುತ್ತದೆ.
ಟಿಪ್ಪರ್ ಲಾರಿಗಳ ಹಾವಳಿ: ಸರ್ಜಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಪಾರ್ಟ್‌ಮೆಂಟ್, ವಿಲ್ಲಾ ಮತ್ತು ಮನೆಗಳು ನಿರ್ಮಾಣವಾಗುತ್ತಿದ್ದು, ತಮಿಳುನಾಡಿನ ಹೊಸೂರು, ಡೆಂಕಣಿಕೋಟೆ, ತಳಿ ಭಾಗದಲ್ಲಿರುವ ಕ್ರಷರ್‌ಗಳಲ್ಲಿ ವಾಹನದ ಪ್ರಮಾಣಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ತುಂಬಿಸಿಕೊಂಡು ಟ್ರಕ್‌ಗಳು ಸಂಚರಿಸುತ್ತವೆ ಅತಿಯಾದ ತೂಕದಿಂದಾಗಿ ರಸ್ತೆಗಳು ಹಾಳಾಗಿವೆ. ಡಸ್ಟ್ ತುಂಬಿದ ಟ್ರಕ್‌ಗಳಿಂದ ಧೂಳು ಚೆಲ್ಲುತ್ತದೆ.ಇದರಿಂದಲೂ ರಸ್ತೆಗಳು ಹದಗೆಡುತ್ತಿವೆ.
ಆಕ್ರಮಿಸಿಕೊಂಡ ಪಾದಚಾರಿಮಾರ್ಗ: ಸರ್ಜಾಪುರ ಬಸ್ ನಿಲ್ದಾಣದಿಂದ ರಸ್ತೆಯ ಎರಡೂ ಬದಿಯಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗ ಇದ್ದರೂ, ಈ ಮಾರ್ಗದಲ್ಲಿ ಹಣ್ಣು, ತರಕಾರಿ, ಹೋಟೆಲ್ ಹಾಗೂ ಮತ್ತಿತರ ಬೀದಿ ಬದಿ ವ್ಯಾಪಾರಿಗಳು ಅಂಗಡಿಗಳನ್ನು ಇಟ್ಟುಕೊಂಡು ಅತಿಕ್ರಮಿಸಿಕೊಂಡಿದ್ದಾರೆ ಇದರಿಂದ ಪಾದಚಾರಿಗಳು ರಸ್ತೆಗಿಳಿಯುತ್ತಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ.
ಅಡ್ಡಾದಿಡ್ಡಿ ಪಾಕಿರ್ಂಗ್: ಸರ್ಜಾಪುರ ಮೈದಾನದ ರಸ್ತೆಯಲ್ಲಿ ಜೆಸಿಬಿ, ಕ್ರೇನ್, ಬಸ್ ಸೇರಿ ಇನ್ನಿತರ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಸರ್ಜಾಪುರ-ಅಬ್ಬಯ್ಯ ಸರ್ಕಲ್‌ವರೆಗೂ 1.5 ಕಿಲೋಮೀಟರ್ ರಸ್ತೆಯಲ್ಲಿ ುಟ್‌ಪಾತ್ ಒತ್ತುವರಿ ಮಾಡಿಕೊಳ್ಳಲಾಗಿದೆ. ರಸ್ತೆಯ ಮಧ್ಯೆ ಅಡ್ಡಾದಿಡ್ಡಿ ಪಾರ್ಕಿಗ್ ಮಾಡಿ ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾಗಿದೆ.
ಸರ್ಜಾಪುರದಿಂದ ಇಟ್ಟಂಗೂರು, ಗೋಣಿಘಟ್ಟಪುರ ಮಾರ್ಗವಾಗಿ ಹೊಸಕೋಟೆಗೆ ತೆರಳುವ ಮಾರ್ಗದ ರಸ್ತೆ ಕಿರಿದಾಗಿದೆ, ರಸ್ತೆಯ ಪಕ್ಕದಲ್ಲಿ 20 ಅಡಿಗಳಷ್ಟು ಉದ್ದದ ರಾಜಕಾಲುವೆ ಅಂಟಿಕೊಂಡಿದೆ, ಪ್ರತಿನಿತ್ಯ ವಾಹನ ಸವಾರರು ಪ್ರಾಣ ಕೈಯಲ್ಲಿಡಿದುಕೊಂಡು ಸಂಚಾರ ನಡೆಸಬೇಕಾಗಿದೆ, ರಸ್ತೆ ವಿಸ್ತರಣೆ ಮಾಡಿ ಮರ ಡಾಂಬರೀಕರಣ ಮಾಡಬೇಕು.
ಎಸ್.ಎಂ ಶಿವಕುಮಾರ್ ಸರ್ಜಾಪುರ ಗ್ರಾಮ ಪಂಚಾಯಿತಿ ಸದಸ್ಯ
.