ಜಿಲ್ಲೆ

ಸಾರಿಗೆ ಸಂಜೀವಿನಿಗೆ ಚಾಲನೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಬುಧವಾರ ನೌಕರರು ಹಾಗೂ ಅವರ ಅವಲಂಬಿತರಿಗೆ ಸಾರಿಗೆ ಸಂಜೀವಿನಿ ನಗದು ರಹಿತ ವೈದ್ಯಕಿಯ ಚಿಕಿತ್ಸೆ ಯೋಜನೆಯ ಅನುಷ್ಠಾನಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಮಾತನಾಡಿ, ಸಂಸ್ಥೆಯ ನೌಕರರು ಅನಾರೋಗ್ಯದ ಸಂದರ್ಭದಲ್ಲಿ ಹಣಕಾಸಿನ ತೊಂದರೆಯಿಂದ ಚಿಕಿತ್ಸೆ ಪಡೆದುಕೊಳ್ಳಲು ಹಿಂದೆ ಸರಿಯಬಾರದು ಎಂಬ ಉದ್ದೇಶದಿಂದ ಕರ್ನಾಟಕ ವೈದ್ಯಕಿಯ ವಿಜ್ಞಾನ ಸಂಸ್ಥೆ (ಕಿಮ್ಸ್) ಸಹಯೋಗದೊಂದಿಗೆ ನಗದು ರಹಿತ ವೈದ್ಯಕಿಯ ಚಿಕಿತ್ಸೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.

ಸಂಸ್ಥೆಯ ನೌಕರರು ಮತ್ತು ಅವರ ಅವಲಂಬಿತರು ಕಿಮ್ಸ್ ಆಸ್ಪತ್ರೆಗೆ ಹೋಗಿ ತಮ್ಮ ಗುರುತಿನ ಚೀಟಿ ತೋರಿಸಿ ವಿವರಗಳನ್ನು ತಿಳಿಸಿ ವೈದ್ಯಕಿಯ ಚಿಕಿತ್ಸೆಗಾಗಿ ದಾಖಲಾದರೆ, ಕಿಮ್ಸ್ ನಿಂದ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆ ಅನುಸಾರ ಬಿಲ್ಅನ್ನು ನೌಕರರ ಪರವಾಗಿ ಸಾರಿಗೆ ಸಂಸ್ಥೆಯು ಕಿಮ್ಸ್ ಗೆ ಭರಿಸುತ್ತದೆ ಎಂದು ತಿಳಿಸಿದರು.

ಸಂಜೀವಿನಿ ಯೋಜನೆಯನ್ನು ಸಂಸ್ಥೆಯ ನೌಕರರು ಹಾಗೂ ಅವರ ಅವಲಂಬಿತರು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಪ್ರಾಂಶುಪಾಲ ಡಾ. ಈಶ್ವರ ಹೊಸಮನಿ, ಡಾ. ಲಕ್ಮೀಕಾಂತ ಲೋಕರೆ, ವಿವಿಧ ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.