ಸಿರಗುಪ್ಪ ತಾಲೂಕಿನ ಅಗಸನೂರು ಗ್ರಾಮದಲ್ಲಿ ಅಲಾಯಿ ಕುಣಿಯನ್ನು ಹೂವಿನಿಂದ ಅಲಂಕರಿಸಿರುವುದು. 
ಜಿಲ್ಲೆ

ಅಗಸನೂರಿನಲ್ಲಿ ಸರಗಸ್ತಿ ಸಂಭ್ರಮ

ಗಾಯತ್ರಿ ಮಾಲಿಪಾಟೀಲ್

ಸಿರಗುಪ್ಪ: ಅಗಸನೂರು ಗ್ರಾಮದಲ್ಲಿ ಮೊಹರಂ ಹಿನ್ನೆಲೆಯಲ್ಲಿ ಶುಕ್ರವಾರ ಏಳನೇ ದಿನದ ಹಗಲು ಸರಗಸ್ತಿಯನ್ನು ಭಕ್ತಿಯಿಂದ ಆಚರಿಸಲಾಯಿತು.

ಗ್ರಾಮದಲ್ಲಿ ತೆಂಗಿನಕಾಯಿ ಹರಕೆ ನೀಡುವುದು ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಚಂದ್ರ ದರ್ಶನದ ನಂತರ ಅಲಾಯಿ ಕುಣಿಗೆ ಗುದ್ದಲಿ ಹಾಕಿದ ದಿನದಿಂದ ದೇವರ ವಿಸರ್ಜನೆವರೆಗೆ ಗ್ರಾಮದ ಮಹಿಳೆಯರು ಹೂ ಮುಡಿಯುವುದಿಲ್ಲ. ಸಿಂಧೂರ ಹಚ್ಚುವುದಿಲ್ಲ. ಗ್ರಾಮಸ್ಥರು ಚಪ್ಪಲಿ ಧರಿಸುವುದಿಲ್ಲ. ಮನೆಯ ಬಾಗಿಲು ಮುಚ್ಚುವುದಿಲ್ಲ. ಮದ್ಯ-ಮಾಂಸ ಸೇವನೆ ತ್ಯಜಿಸುತ್ತಾರೆ.

ಏಳನೇ ದಿನದ ಹಗಲು ಸರಗಸ್ತಿಯಲ್ಲಿ ಪುರುಷರು ಕನ್ನಡದ ರಿವಾಯತ್ ತಕ್ಕಂತೆ ಬಿಂದಿಗೆ ಹಿಡಿದು ಕುಣಿಯುತ್ತಾರೆ. ಲಿಂಗಾಯತ ಸಮುದಾಯದ ಶರಬಣ್ಣ ತಾತ ಮಸೀದಿಯಲ್ಲಿ ಅಷ್ಟ ದಿಕ್ಕುಗಳಿಗೆ ಪ್ರಾರ್ಥನೆ ಸಲ್ಲಿಸಿ, ಹಲಗೆ ನಾದಕ್ಕೆ ಹೆಜ್ಜೆ ಹಾಕಿ ಮುಖ್ಯ ದೇವರನ್ನು ಹೊತ್ತು ಮಳೆ ಬೆಳೆ ಕುರಿತು ಭವಿಷ್ಯ ನುಡಿಯುವುದು ಸಂಪ್ರದಾಯವಾಗಿದೆ. ಗ್ರಾಮದ ಹಿರಿಯರು ಬಿಳಿ ಬಟ್ಟೆ ಧರಿಸಿ, ತಲೆಗೆ ಪೇಟಾ ಸುತ್ತಿ ಕಾಯಿ ಹಿಡಿದು ಸಾಲಗಿ ಬಂದು ಭಕ್ತಿಯ ಪರಕಾಷ್ಠೆ ಮೆರೆದರು.