school 
ಜಿಲ್ಲೆ

ಸಾಹಿತ್ಯ, ಸಂಘಟನೆಗಳಲ್ಲಿ ಸಮಾನವಾಗಿ ತೊಡಗಿಕೊಂಡ ಸಾರಾ ಅಬೂಬಕರ್

ವಿಜಯವಾಣಿ ಸುದ್ದಿಜಾಲ ಹೆಬ್ರಿ

ದಯೆಯೇ ಧರ್ಮದ ಜೀವನ ಮೌಲ್ಯ ಎಂದು ಬಲವಾಗಿ ನಂಬಿ ಬದುಕಿದ ಚಿಂತಕಿ ಸಾರಾ ಅಬೂಬಕರ್ ಅವರು ಸಾಹಿತ್ಯ ಮತ್ತು ಸಂಘಟನೆಯ ಕೆಲಸಗಳಲ್ಲಿ ಸಮಾನವಾಗಿ ತೊಡಗಿಕೊಂಡ ಸಾಮಾಜಿಕ ಜವಾಬ್ದಾರಿಯ ಬರಹಗಾರ್ತಿ ಎಂದು ಚೇಳಾಯ್ರೂ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಅಭಿಪ್ರಾಯಪಟ್ಟರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಉಡುಪಿ ಸಾಹಿತ್ಯ ವಿಚಾರ ವೇದಿಕೆ ‘ಚಕೋರ’ ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಮತ್ತು ಇಂಗ್ಲೀಷ್ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಸಾರಾ ಅಬೂಬಕರ್ ಕೃತಿಗಳಲ್ಲಿ ಸಾಮಾಜಿಕ ಮೌಲ್ಯಸಂಘರ್ಷ’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೊ.ಜಯಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದ ಮೂಲಕ ಅರಿವಿನ ಜಗತ್ತಿಗೆ ತೆರೆದುಕೊಳ್ಳುವ ಮಹಿಳೆಯರೇ ಮತೀಯ ಮೂಲಭೂತವಾದಕ್ಕೆ ಮದ್ದರೆಯುವ ನಿಜವಾದ ಬಂಡಾಯಗಾರರು ಎಂದರು.

ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ. ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಸೌಮ್ಯಲತಾ ಪಿ. ಸ್ವಾಗತಿಸಿದರು. ವೈಷ್ಣವಿ ಪ್ರಾರ್ಥಿಸಿದರು. ಇಂಗ್ಲೀಷ್ ವಿಭಾಗದ ನಿಶ್ಚಿತಾ ಎಸ್.ಹೋಬಳಿದಾರ್ ವಂದಿಸಿದರು. ಕನ್ನಡ ಉಪನ್ಯಾಸಕ ರವಿಚಂದ್ರ ಬಾಯಿರಿ ನಿರೂಪಿಸಿದರು.