ಹೊನ್ನಾವರ: ನೆಲೆಮಾವು ಮಠದ ಹೊನ್ನಾವರ ತಾಲೂಕಿನ ವ್ಯಾಪ್ತಿಯ ಸಪ್ತಗ್ರಾಮ ಸೀಮಾ ಸಮಾವೇಶವು ಖರ್ವಾ ಕೋಳಗದ್ದೆಯ ಶ್ರೀ ಸಿದ್ಧಿವಿನಾಯಕ ದೇವಾಲಯದಲ್ಲಿ ಭಾನುವಾರ ನಡೆಯಿತು.
ನೆಲೆಮಾವು ಮಠದ ಪೀಠಾಧಿಪತಿಗಳಾದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಹಾಗೂ ಶಿರಳಗಿಯ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಉದ್ಘಾಟಿಸಿದರು.
ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಮಾತನಾಡಿ, ಪಂಚಯಜ್ಞಗಳ ಆಚರಣೆ ಮತ್ತು ಬ್ರಾಹ್ಮಣರು ಪ್ರತಿನಿತ್ಯ ಆಚರಿಸಬೇಕಾದ ಕರ್ಮಗಳ ಕುರಿತು ಮಾಹಿತಿ ನೀಡಿದರು. ವಿದ್ವಾನ್ ಅನಂತಮೂರ್ತಿ ಭಟ್ಟ ಯಲುಗಾರ ಮಾತನಾಡಿ, ಬ್ರಾಹ್ಮಣರ ಆಚರಣೆಗಳಲ್ಲಿ ಇರುವ ವೈಜ್ಞಾನಿಕ ಹಿನ್ನಲೆ ವಿವರಿಸಿದರು. ಶಂಭು ಹೆಗಡೆ ಹವ್ಯಕರ ಸಮಸ್ಯೆಗಳು ಮತ್ತು ಪರಿಹಾರದ ಕುರಿತು ಉಪನ್ಯಾಸ ನೀಡಿದರು.
ಸಮಾರೋಪ ಸಮಾರಂಭದಲ್ಲಿ ನೆಲೆಮಾವು ಮಠದ ಪೀಠಾಧಿಪತಿ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಮಾತನಾಡಿ ಶಾಸ್ತ್ರಗಳು, ನಿತ್ಯ ಕರ್ಮಗಳ ಆಚರಣೆ ಮಹತ್ವ ವಿವರಿಸಿದರು. ಮಠದ ಶಿಷ್ಯರು ಪ್ರತಿದಿನ ನಿತ್ಯಕರ್ಮಗಳ ಜೊತೆಗೆ ಭಗವದ್ಗೀತೆ, ಶಂಕರಾಚಾರ್ಯರ ಸ್ತ್ರೋತ್ರಗಳನ್ನು ಪಠಿಸಬೇಕು ಎಂದರು. ಮಠದ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಗ್ರಾಮಗಳನ್ನು ಪ್ರತ್ಯೇಕ ಸೀಮೆ ಎಂದು ಘೊಷಿಸಿ, ‘ಸಪ್ತಗ್ರಾಮ ಸೀಮೆ’ ಎಂದು ಹೆಸರಿಸಿ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ವಿದ್ವಾನ್ ವಿನಾಯಕ ಭಟ್ಟ ತೋಟಿ ಹಾಣಗೆರೆ ಅವರು ರಚಿಸಿದ ಮಾಧವಾನಂದಾಷ್ಟಕವನ್ನು ಗುರುಗಳಿಗೆ ಸಮರ್ಪಿಸಿದರು. ಅತಿಥಿಗಳಾಗಿ ಹಿರಿಯ ಶಿಕ್ಷಕಿ ಶ್ವೇತಾ ಹೆಗಡೆ, ಹಡಿನಬಾಳ ಮೂಲದ ಭದ್ರಾವತಿಯಲ್ಲಿರುವ ಡಾ. ಕೃಷ್ಣ ಎಸ್. ಭಟ್ಟ, ಇತರರಿದ್ದರು. ಶಂಭು ಹೆಗಡೆ, ಗೋಪಾಲ ಹೆಗಡೆ, ಶಿವಾನಂದ ಭಟ್ಟ, ಎಸ್.ಎಂ. ಭಟ್ಟ, ವಿದ್ವಾನ್ ವಿನಾಯಕ ಭಟ್ಟ ತೋಟಿ, ನಾಗರಾಜ ಹೆಗಡೆ ಖಾಸ್ಕಂಡ ಕಾರ್ಯಕ್ರಮ ನಿರ್ವಹಿಸಿದರು.