ಹುಬ್ಬಳ್ಳಿ: ಬಿಜೆಪಿಯವರು ಶ್ರೀಕಾಂತ ಪೂಜಾರಿ ಪ್ರಕರಣವನ್ನು ಮುಂಬರುವ ಲೋಕಸಭಾ ಚುನಾವಣೆಗೆ ಅಜೆಂಡಾ ಮಾಡಿಕೊಳ್ಳುತ್ತಿದ್ದಾರೆ, ಅವರು ರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಹಿಂದುಗಳಿಗೆ ಏನಾದರೂ ಲಾಭ ಆಗಿದೆಯೆ? ಎಂದು ಕಾಮಿರ್ಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಸೇವಕ ಶ್ರೀಕಾಂತ ಪೂಜಾರಿ ಮೇಲೆ ಕೇಸ್ ಹಾಕಿದರೆ ನಮಗೆ ಲಾಭವಾಗುತ್ತದೆಯೇ? ಅವರೊಬ್ಬರೇ ಹಿಂದುಗಳೇ? ಈಗಾಗಲೇ ಆತನ ಮೇಲೆ ಹಲವಾರು ಪ್ರಕರಣಗಳಿವೆ, ಅದಕ್ಕೆ ಸಂಬಂಧಿಸಿ ಆತನನ್ನು ಕೋರ್ಟ್ಗೆ ಕರೆದೊಯ್ಯಲಾಗಿತ್ತು. ಆದರೆ, ಇಂತಹದನ್ನೆ ಹುಡುಕುತ್ತಿದ್ದ ಬಿಜೆಪಿಗರು ಆತನ ಹೆಸರಲ್ಲಿ ಪ್ರತಿಭಟನೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮಮಂದಿರ ಮಾಡಿದವರು ನಾವು, ದಿ. ರಾಜೀವ ಗಾಂಧಿ ಅವರು ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಇಷ್ಟು ವರ್ಷ ಮಂದಿರಕ್ಕಾಗಿ ಕೊಟ್ಟ ಇಟ್ಟಿಗೆಗಳು ಎಲ್ಲಿ ಹೋದವು. ಮಂದಿರ ಪಕ್ಕದ ಜಮೀನಿನ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ. ಜಮೀನು ಬೆಲೆ ಹೆಚ್ಚಳ ಮಾಡಿ ಭ್ರಷ್ಟತೆ ಮೆರೆದಿದ್ದಾರೆ. ಇದರ ಬಗ್ಗೆ ಯಾರು ಹೋರಾಟ ಮಾಡಬೇಕು? ಎಂದು ಲಾಡ್ ಪ್ರಶ್ನೆ ಮಾಡಿದರು.
ರಾಮನೂ ನಮ್ಮ ದೇವರು, ದುರ್ಗಮ್ಮ ನಮ್ಮ ದೇವರು, ಈ ಹಿನ್ನೆಲೆ ಹರಿಪ್ರಸಾದ್ ಹೇಳಿಕೆ ಹೇಗೆ ವಿವಾದ ಆಗುತ್ತದೆ? ಎಂದರು.
ಆಸೆ ಇಲ್ಲ:ಲೋಕಸಭೆ ಚುನಾವಣೆಗೆ ಸ್ಪಧಿರ್ಸಲು ನನಗೆ ಆಸೆ ಇಲ್ಲ. ನಾನು ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ವಿಶ್ವಗುರು ಅಂತಾರೆ, ಅವರಿಗೆ ಇಷ್ಟೊಂದು ಪ್ರಚಾರ ಬೇಕೆ? ಎಲ್ಲೇ ಹೋದರೂ ಕ್ಯಾಮೆರಾ ಇರುತ್ತದೆ. ಅವರು ಒಂದು ತಿಂಗಳು ಟಿವಿ ಬಂದ್ ಮಾಡಿ ಮತ ಕೇಳಲಿ ಎಂದು ಲಾಡ್ ಸವಾಲು ಹಾಕಿದರು.