ಜಿಲ್ಲೆ

ಹಿರಿಯರ ಮೌಲ್ಯಗಳನ್ನು ಕಟ್ಟಿಕೊಡುವ ಕಾರ್ಯ: ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್. ಸಂತೋಷ್ ಹೆಗ್ಡೆ ಆಶಯ

Dakshina Kannada


ಕುಂದಾಪುರ: ಹಿರಿಯರು ಕಟ್ಟಿಕೊಟ್ಟ ಮೌಲ್ಯಗಳು ಕುಸಿಯುತ್ತಿದ್ದು, ಮತ್ತೆ ಅದನ್ನು ಕಟ್ಟುವ ಮಹತ್ತರ ಜವಾಬ್ದಾರಿಯಿದೆ. ಮಾನವೀಯತೆ ಬೆಳೆಸಿಕೊಂಡು ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯವಿದೆ ಎಂದು ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್. ಸಂತೋಷ್ ಹೆಗ್ಡೆ ಹೇಳಿದರು.

ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ವೇದಿಕೆಯಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ, ವಿಕಾಸ 22 ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆ ಲೋಗೊ ಬಿಡುಗಡೆ ಮಾಡಿ ಮಾತನಾಡಿದರು.
ಇಂದು ಇರುವವರು ಹಾಗೂ ಇಲ್ಲದವರ ನಡುವೆ ಅಂತರ ಹೆಚ್ಚಿದ್ದು ತಿಕ್ಕಾಟ ಜಾಸ್ತಿಯಾಗಿದೆ. ದುರಾಸೆ ಅತಿಯಾಗಿದೆ. ತೃಪ್ತಿಯಿದ್ದರೆ ದುರಾಸೆ ಇರುವುದಿಲ್ಲ. ಮಕ್ಕಳಿಗೆ ನೀತಿ ಪಾಠ ಹೇಳುವ ಗುಣವನ್ನು ಪಾಲಕರು ಬೆಳೆಸಿಕೊಳ್ಳಬೇಕು. ಇಂದಿನ ಶಿಕ್ಷಣದಲ್ಲಿ ಮೌಲ್ಯ ಹಾಗೂ ನೈತಿಕತೆ ಕಲಿಸುವ ಕಾರ್ಯವಾಗಬೇಕು ಎಂದರು.

ಬ್ಯಾರಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಕೆ.ಎಂ.ಅಬ್ದುಲ್ ರೆಹೆಮಾನ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರೀ ಯೂನಿವರ್‌ಸಿಟಿ ಸಹಾಯಕ ನಿದೇರ್ಶಕ ಮಾರುತಿ, ಕರಾವಳಿ ಕಾವಲು ಪಡೆ ಮುಖ್ಯಸ್ಥ ಅಬ್ದುಲ್ ವಾಹಾಬ್, ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಸಿದ್ದಪ್ಪ ಕೆ.ಎಸ್., ಪ್ರೌಢಶಾಲಾ ಮುಖ್ಯಶಿಕ್ಷಕ ಜಟ್ಟಪ್ಪ, ಅಂಗನಾವಡಿ ಕೇಂದ್ರ ಮುಖ್ಯಸ್ಥೆ ಸುಮಿತ್ರಾ ಇದ್ದರು.

ಕಂಪ್ಯೂಟರಿಗೆ ಕನ್ನಡ ಕಲಿಸಿದ ಮಣಿಪಾಲ ಎಂಐಟಿ ನಿವೃತ್ತ ಉಪನ್ಯಾಸಕ ಪ್ರೊ.ಕೆ.ಪಿ.ರಾವ್ ಹಾಗೂ ಅಂತಾರಾಷ್ಟ್ರೀಯ ವಿಶೇಷ ಕ್ರಿಕೆಟ್ ತಂಡದ ವೇಗದ ದಾಳಿಗಾರ ಪೃಥ್ವಿರಾಜ್ ಶೆಟ್ಟಿ ಹುಂಚನಿ ಅವರನ್ನು ಸನ್ಮಾನಿಸಲಾಯಿತು.

ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥೆ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ಹಾಜಿ ಕೆ.ಮೊಯಿದ್ದೀನ್ ಬ್ಯಾರಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಪ್ರಾಸ್ತಾವಿಕ ಮಾತನಾಡಿದರು. ಇಂಗ್ಲಿಷ್ ಉಪನ್ಯಾಸಕ ಡಾ.ಹಯವದನ ಉಪಾಧ್ಯ, ಸಂದೀಪ ಶೆಟ್ಟಿ ನಿರೂಪಿಸಿದರು. ಪ್ರಾಂಶುಪಾಲೆ ಡಾ.ಫಿದೂರ್ಷ್, ಜಯಕರ ಶೆಟ್ಟಿ ವರದಿ ವಾಚಿಸಿದರು. ರೇಣುಕಾ ಶೈಕ್ಷಣಿಕ, ಕ್ರೀಡೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಪ್ರಾಂಶುಪಾಲ ಡಾ.ಶಬ್ಬೀರ್ ವಂದಿಸಿದರು.