ವಿಜಯವಾಣಿ ಸುದ್ದಿಜಾಲ ಉಡುಪಿ
ಯೋಗ್ಯತೆ ಇಲ್ಲದೆ ಏನನ್ನೂ ಪಡೆಯಲಾಗದು. ದುಡಿದು ಹಣ ಗಳಿಸಬೇಕೇ ಹೊರತು ತಂದೆಯ ಸಂಪತ್ತು ಅನುಭವಿಸುತ್ತಿದ್ದರೆ ಜೀವನ ಸಾರ್ಥಕವಾಗದು. ಅಸ್ತ್ರ-ಶಸ್ತ್ರದಿಂದ ಯುದ್ಧ ಗೆಲ್ಲಲು ಸಾಧ್ಯವಿಲ್ಲ. ಅದು ಮನುಷ್ಯನ ನಾಶಕ್ಕೆ ಕಾರಣವಾಗುವುದು. ಶಾಸ್ತ್ರ (ವಿಚಾರ, ಜ್ಞಾನ)ದಿಂದ ಜಗವನ್ನೇ ಗೆಲ್ಲಬಹುದು. ವಿಶ್ವತೋಮುಖವಾಗಿರುವ ಭಗವದ್ಗೀತೆಯು ಸದ್ಬುದ್ಧಿ ಕರುಣಿಸುವ ಹಾಗೂ ಆತ್ಮೋದ್ಧಾರ ಮಾಡಿಕೊಳ್ಳಲು ಎಲ್ಲರ ಬದುಕಿಗೆ ಮಾರ್ಗಸೂಚಿ ಗೈಡ್ ಆಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉದ್ಯಮಿ ಗೋಪಾಡಿ ಶ್ರೀನಿವಾಸ್ ರಾವ್ ಹಾಗೂ ಇಂಜಿನಿಯರ್ ನಾಗರಾಜ್ ರಾವ್ ಅವರಿಗೆ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಡುಪಿ ಎಚ್ಪಿ ಗ್ಯಾಸ್ನ ಬಾಲಾಜಿ ವಿಷ್ಣು ಆಚಾರ್ಯ, ವೈ. ಮೋಹನ ರಾವ್ ಮಾತನಾಡಿದರು. ಸಿಎ ಗಣೇಶ್ ಬಿ. ಕಾಂಚನ್, ಉದ್ಯಮಿ ವೈ. ಧೀರಜ್ ರಾವ್, ಶ್ರೀನಿಧಿ ಗ್ರಾಫಿಕ್ ಟೆಕ್ನ ಯತೀಶ ಚಂದ್ರ, ನಿವೃತ್ತ ಪತ್ರಕರ್ತ ಎಸ್. ನಿತ್ಯಾನಂದ ಪಡ್ರೆ ಉಪಸ್ಥಿತರಿದ್ದರು.
ಪುತ್ತಿಗೆ ಮಠದ ಶಿಷ್ಯ ಸಮರ್ಥ ಜೋಶಿ ವೇದಘೋಷ ಪಠಿಸಿದರು. ಕುಮಾರಿ ಮಾಧ್ವಿ ಪುರಂದರದಾಸರ ಕೀರ್ತನೆ ಹಾಡಿದರು. ನಿವೃತ್ತ ಪ್ರಾಂಶುಪಾಲ ಕೆ.ಎ. ಕೃಷ್ಣಮೂರ್ತಿ ಭಟ್ ಸ್ವಾಗತಿಸಿದರು. ಪುತ್ತಿಗೆ ಮಠದ ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಸಹಕರಿಸಿದರು.
ಅಂಬಲಪಾಡಿಯ ಬ್ರಹ್ಮಗಿರಿ ಪ್ರಕಾಶನದ ಆಶ್ರಯದಲ್ಲಿ ವೈ.ಮೋಹನ ರಾವ್ ಅವರು ತುಳು ಭಾಷೆಯಲ್ಲಿ ಶ್ಲೋಕಗಳ ಆರ್ಥ ಸಹಿತ ರಚಿಸಿರುವ ಶ್ರೀಮದ್ಭಗವದ್ಗೀತಾ ಪುಸ್ತಕವನ್ನು ಶ್ರೀಗಳು ಬಿಡುಗಡೆ ಮಾಡಿದರು. ಅಲ್ಲದೆ, ತಂಬಿಹಳ್ಳಿ ಮಠದ ಶ್ರೀಗಳು ಸಂಸ್ಕೃತದಲ್ಲಿ ರಚಿಸಿರುವ ಸಂಪೂರ್ಣ ಭಗವದ್ಗೀತಾ ಏಕ ಶ್ಲೋಕಿ ಹಾಗೂ ಪ್ರತಿ ಅಧ್ಯಾಯ ಸಾರ ಏಕ ಶ್ಲೋಕಿ ಗ್ರಂಥವನ್ನು ಸುಗುಣೇಂದ್ರ ಶ್ರೀ ಹಾಗೂ ಪುತ್ತಿಗೆ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು.
ಧರ್ಮದ ಬಗ್ಗೆ ಕಿಂಚಿತ್ ಜ್ಞಾನ ಇಲ್ಲದವರೂ ಸಹ ಧರ್ಮದ ರಕ್ಷಣೆಯ ಬಗ್ಗೆ ಭಾರಿ ಮಾತನಾಡುವುದು ಕಂಡುಬರುತ್ತಿದೆ. ಮೊದಲು ಧರ್ಮದ ಮಹತ್ವ ಅರಿತು ಮಾತನಾಡಬೇಕು. ಅದಕ್ಕಾಗಿ ಭಗವದ್ಗೀತೆಯ ತಳಹದಿಯ ಅರಿವಿನ ಮೂಲಕ ಸನಾತನ ಧರ್ಮ, ದೇಶ ಹಾಗೂ ವಿಶ್ವದ ರಕ್ಷಣೆ ಆಗಬೇಕು. ಗೀತಾ ಜ್ಞಾನದ ಆಧಾರದಲ್ಲಿ ಜಾಗತಿಕವಾಗಿ ಸಂಘಟಿತವಾದರೆ ದ್ವೇಷ-ಕಲಹ, ಯುದ್ಧಗಳೂ ಘಟಿಸದು. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಶ್ರೀ