ಮೈಸೂರು: ಜಗತ್ತಿನ ಸರ್ವಶ್ರೇಷ್ಠರಲ್ಲಿ ಒಬ್ಬರಾದ ಸಂತಕವಿ ಸರ್ವಜ್ಞ ಮಹಾಜ್ಞಾನಿಯಾಗಿದ್ದರು. ಅವರು ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸಂತಕವಿ ಶ್ರೀ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಪಿಡುಗಿನ ವಿರುದ್ಧ ಜಾಗೃತಿ ಉಂಟುಮಾಡಿದವರಲ್ಲಿ ಸರ್ವಜ್ಞರು ಅಗ್ರಗಣ್ಯರು ಎಂದು ತಿಳಿಸಿದರು.
ಸರ್ವಜ್ಞರು ಸಾವಿರಕ್ಕೂ ಹೆಚ್ಚು ತ್ರಿಪದಿಗಳನ್ನು ಹಾಗೂ ಏಳು ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ಮಾಹಿತಿ ದೊರಕಿದೆ. ಸರ್ವಜ್ಞರ ವಚನ ಹಾಗೂ ತ್ರಿಪದಿಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ಸಮಾಜದ ಬದಲಾವಣೆಯಲ್ಲಿ ಅವರ ತ್ರಿಪದಿ ಮತ್ತು ವಚನಗಳ ಪ್ರಭಾವ ಬಹಳ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು.
ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷ ರಘು ಕೌಟಿಲ್ಯ ಮಾತನಾಡಿ, ಕುಂಬಾರರ ಚಕ್ರ ಆಧುನಿಕ ವೈಜ್ಞಾನಿಕತೆಯ ತಳಹದಿ. ಕೌಶಲಭರಿತ ಕುಂಬಾರನ ಈ ಕೆಲಸ ಸಮಾಜಕ್ಕೆ ಒಂದು ಅತ್ಯುತ್ತಮ ಕೊಡುಗೆ. ಇಷ್ಟು ಅದ್ದೂರಿಯಾಗಿ ಸರ್ವಜ್ಞರ ಜಯಂತಿಯನ್ನು ಆಚರಿಸುವ ಮೂಲಕ ಕುಂಬಾರರ ಸ್ವಾಭಿಮಾನ, ಒಗ್ಗಟ್ಟು ಮತ್ತು ಸಂಘಟನೆಯ ಶಕ್ತಿಯನ್ನು ಸಮಾಜಕ್ಕೆ ತೋರಿದ್ದೀರಿ ಎಂದರು.
ಮುಖ್ಯ ಭಾಷಣಕಾರ ಮಹೇಶ್ ಹರವೆ ಮಾತನಾಡಿ, ಸರ್ವಜ್ಞರು ಸಮಾಜದ ಅಂಕುಡೊಂಕುಗಳನ್ನು ತಮ್ಮ ತ್ರಿಪದಿ ಹಾಗೂ ವಚನಗಳ ಮೂಲಕ ತಿದ್ದಲು ಯತ್ನಿಸಿದರು. ಸರ್ವಜ್ಞರು ಯಾವುದೇ ಸಮಾಜಕ್ಕೆ ಸೀಮಿತವಾದವರಲ್ಲ. ಪ್ರಬುದ್ಧ ಚಿಂತನೆಗಳ ಮೂಲಕ ತನ್ನಂತೆ ಇತರರನ್ನು ಕಾಣುವ ಮನಸ್ಥಿತಿ ಹಾಗೂ ಪ್ರಾಕೃತಿಕ ಧರ್ಮವನ್ನು ಹೊಂದಿದ್ದರು ಎಂದು ತಿಳಿಸಿದರು.
ಆಧ್ಯಾತ್ಮಿಕ ಮತ್ತು ವೈಚಾರಿಕ ಪ್ರಭೆಯುಳ್ಳ ಸರ್ವಜ್ಞರನ್ನು ನಮ್ಮವನಲ್ಲ ಎನ್ನಲು ಯಾರಿಂದಲೂ ಸಾಧ್ಯವಿಲ್ಲ. ಜಾತಿ- ಧರ್ಮ, ಮೇಲು-ಕೀಳು, ಎಲ್ಲ ಭೇದಗಳನ್ನು ದಾಟಿ ಬದುಕಬೇಕೆಂದರೆ, ಸರ್ವಜ್ಞನ ತ್ರಿಪದಿ ಮತ್ತು ವಚನಗಳು ದಾರಿದೀಪವಾಗಿವೆ. ಮನುಷ್ಯ ಮಹಾತ್ಮನಾಗುವ ಮೂಲಕ ದೇವರಾಗುತ್ತಾನೆ ಎಂಬ ಸರ್ವಜ್ಞರ ಆಶಯ ವಿಶಾಲ ಅರ್ಥವುಳ್ಳದ್ದು ಎಂದರು.
ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಮಠದ ಶ್ರೀ ಬಸವ ಕುಂಬಾರಗುಂಡಯ್ಯ ಸ್ವಾಮೀಜಿ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಇತರರಿದ್ದರು.