ಜಿಲ್ಲೆ

ಅನೇಕತೆಯಲ್ಲಿ ಏಕತೆ ಸಾರಿದ ಶಿಶುನಾಳ ಶರೀಫ: ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಅಭಿಮತ

ಪಂಕಜ ಕೆ.ಎಂ.

ಬೆಂಗಳೂರು: ಶ್ರೇಷ್ಠ ಸಂತ ಶಿಶುನಾಳ ಶರೀಫರು ಬದುಕಿನ ಹಿರಿಮೆಯನ್ನು ಅರಿತು, ಸಮಾಜದಲ್ಲಿನ ತಾರತಮ್ಯಗಳ ನಿವಾರಣೆಗೆ ಶ್ರಮಿಸಿ, ಜಾತಿ- ಮತಗಳ ಗಡಿ ದಾಟಿ ಏಕತೆ ಸಾರಿದರು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದ್ದಾರೆ.

ಶರೀಫರ ಜಯಂತಿ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳಸದ ಗುರು ಗೋವಿಂದ ಭಟ್ಟರಿಂದ ಉಪದೇಶ ಪಡೆದು ಎರಡೂ ಧರ್ಮದವರ ವಿರೋಧವನ್ನು ಎದುರಿಸಿ ಜಾತಿ, ಮತಗಳಿಗಿಂತ ‘ಮಾನವ ಧರ್ಮವೇ ಶ್ರೇಷ್ಠ’ ಎಂದು ಬೋಧಿಸಿದರು ಶರೀರು, ಅನೇಕತೆಯಲ್ಲಿ ಏಕತೆ ಸಾರುವ ಮೂಲಕ ಮತೀಯ ಸೌಹಾರ್ದವನ್ನು ತೋರಿಸಿದ ದಾರ್ಶನಿಕ ವ್ಯಕ್ತಿ ಎಂದರು.

ಗುರು ಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫರು ಹಿಂದು ಹಾಗೂ ಇಸ್ಲಾಂ ಧರ್ಮಗಳ ಸಮನ್ವಯತೆ, ಸಮತೆ, ಸಮಭಾವ, ಸಮಚಿತ್ತದಿಂದ ನೋಡಿದ ಸಮಾನತೆಯ ಹರಿಕಾರರು. ಈ ಅಪರೂಪದ ಗುರು- ಶಿಷ್ಯರನ್ನು ಒಟ್ಟಾಗಿಯೇ ಸ್ಮರಿಸುವ ಪರಂಪರೆ ನಡೆದುಬಂದಿದೆ ಎಂದು ತಿಳಿಸಿದರು.

ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಪ್ರೊ. ಎನ್.ಎಸ್. ಶ್ರೀಧರ ಮೂರ್ತಿ, ಕಸಾಪ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು ಉಪಸ್ಥಿತರಿದ್ದರು.