ಜಿಲ್ಲೆ

ಕನಕದಾಸ ಮತ್ತು ತತ್ವಪದ ಅಧ್ಯಯನ ಮುನ್ನೋಟ

ಪಂಕಜ ಕೆ.ಎಂ.

ಬೆಂಗಳೂರು: ಭಾರತೀಯ ಭಾಷಾ ಚಳವಳಿಯ ವಿವಿಧ ಹಂತಗಳನ್ನು ಗುರುತಿಸಿ, ಕರ್ನಾಟಕ ಭಕ್ತಿ ಚಳವಳಿಯನ್ನು ಹೋಲಿಸಿ, ತೌಲನಿಕ ಅಧ್ಯಯನ ನಡೆಸಬೇಕು ಎಂದು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ವಿವಿಧ ಅಭಿಪ್ರಾಯಗಳು ವ್ಯಕ್ತವಾಯಿತು.

ಕೇಂದ್ರವು ನಗರದಲ್ಲಿ ಶನಿವಾರ ಹಮ್ಮಿಕೊಂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದ ವಿಷಯ ತಜ್ಞರು ಕನಕದಾಸ ಮತ್ತು ತತ್ವಪದ ಅಧ್ಯಯನ ಮುನ್ನೋಟ ಎಂಬ ಶೀರ್ಷಿಕೆಯಡಿ, ಕೇಂದ್ರವು ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಸಂಶೋಧನೆ ಮತ್ತು ಅಧ್ಯಯನದ ರೂಪುರೇಷೆಗಳ ಕುರಿತು ಸಲಹೆಗಳನ್ನು ನೀಡಿದರು.

ಕರ್ನಾಟಕದಲ್ಲಿರುವ ಸಹ ಭಾಷೆಗಳಲ್ಲಿನ ತತ್ವಪದಗಳು, ಭಜನೆಗಳು ಹಾಗೂ ಅಲಕ್ಷ್ಯಕ್ಕೊಳಗಾದ ಕೀರ್ತನಕಾರರ ಪದಗಳನ್ನು ಸಂಗ್ರಹಿಸಿ, ಅವುಗಳನ್ನು ಅಧ್ಯಯನಕ್ಕೆ ಒಳಪಡಿಸಬೇಕು. ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಪರಭಾಷಿಕರಿಗೆ ತತ್ವಪದಗಳನ್ನು, ಕೀರ್ತನೆಗಳನ್ನು ತಲುಪಿಸಬೇಕಾದರೆ ಅದಕ್ಕೆ ಸಂಗೀತದ ಸಾಹಚರ್ಯದ ಜತೆಗೆ ನಾಟಕ, ಬಯಲಾಟ, ತಾಳಮದ್ದಲೆ ಮುಂತಾದ ಕಲಾ ಪ್ರಕಾರಗಳನ್ನು ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಯನ ಕೇಂದ್ರವು ರೂಪಿಸಿರುವ ಕನಕದಾಸ ಸಾಹಿತ್ಯವೂ ಸೇರಿದಂತೆ ತತ್ವಪದ ಸಾಹಿತ್ಯ, ಕೀರ್ತನ ಸಾಹಿತ್ಯ ಮತ್ತು ಭಕ್ತಿ ಚಳವಳಿಯ ವಿಷಯವನ್ನು ಒಳಗೊಂಡು ಸಾಹಿತ್ಯ ಸಂಗ್ರಹ, ಸಮೀಕ್ಷೆ, ಅಧ್ಯಯನ, ಪ್ರಕಟಣೆ, ಪ್ರದರ್ಶನ ಮತ್ತು ಪ್ರಸಾರ ಕಾರ್ಯಗಳನ್ನು ನಡೆಸಬೇಕು ಎಂದು ತಿಳಿಸಿದರು. ಸಲಹೆಗಳನ್ನು ಆಲಿಸಿದ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ, ಸ್ಥಳೀಯ ಸಾಂಸ್ಕೃತಿಕ ಹಿರಿಮೆಯನ್ನು ಪರಿಚಯಿಸುವ ನೆಲೆನಿಷ್ಠ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು, ಕಾರ್ಯಕ್ರಮಗಳನ್ನು ನಡೆಸಲಾಗುವುದು. ಆ ಮೂಲಕ ಕನ್ನಡದ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿ, ಬೆಳೆಸುವುದರ ಕಡೆಗೆ ಗಮನ ಹರಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಸಾಹಿತ್ಯ ಕ್ಷೇತ್ರದ ಪ್ರಮುಖರಾದ ಕೆ. ಮರುಳಸಿದ್ದಪ್ಪ, ಎಸ್.ಜಿ. ಸಿದ್ದರಾಮಯ್ಯ, ಮನು ಬಳಿಗಾರ್, ಎಲ್.ಎನ್. ಮುಕುಂದರಾಜ್, ರಮೇಶ್, ಎಸ್.ಆರ್. ವಿಜಯಶಂಕರ್, ಆರ್.ಜಿ. ಹಳ್ಳಿ ನಾಗರಾಜ್, ಎಚ್.ಎಲ್. ಪುಷ್ಟ, ಎ.ಆರ್. ಗೋವಿಂದಸ್ವಾಮಿ, ಕೆ.ಆರ್. ಸಂಧ್ಯಾರೆಡ್ಡಿ, ಜಾಣಗೆರೆ ವೆಂಟಕರಾಮಯ್ಯ, ಕೆ.ವೈ. ನಾರಾಯಣಸ್ವಾಮಿ, ಬಿ.ಎಂ. ಹನ್ೀ, ಬಂಜಗೆರೆ ಜಯಪ್ರಕಾಶ್, ಡಾ. ವಸುಂಧರಾ ಭೂಪತಿ, ಲಕ್ಷ್ಮಣ ಕೊಡಸೆ ಸೇರಿ 50ಕ್ಕೂ ಅಧಿಕ ಮಂದಿ ವಿಷಯ ತಜ್ಞರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕೇಂದ್ರದ ಸದಸ್ಯ ಸಂಚಾಲಕ ಎಚ್. ದಂಡಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿ ಉಪಸ್ಥಿತರಿದ್ದರು.