ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಪ್ರಕಟಿಸಿರುವ ಸಂತ ಸೇವಾಲಾಲ್ ಪ್ರಶಸ್ತಿ ಸೇರಿ 2023 ಮತ್ತು 2024ನೇ ಸಾಲಿನ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಹಾಗೂ 2022, 2023, 2024ನೇ ಸಾಲಿನ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭ ಗುರುವಾರ (ಮಾ.27) ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಇದೇ ವೇಳೆ ರಾಜ್ಯ ಮಟ್ಟದ ಬಂಜಾರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವವೂ ನಡೆಯಲಿದೆ.
ಪ್ರಥಮ ಬಾರಿಗೆ ಸಂತ ಸೇವಾಲಾಲ್ ಪ್ರಶಸ್ತಿಯನ್ನು ಬಂಜಾರ ಅಭಿವೃದ್ಧಿಗೆ ಶ್ರಮಿಸಿರುವ ಸಾಹಿತಿ ಹಾಗೂ ಮಾಜಿ ಸಚಿವೆ ಡಾ. ಬಿ.ಟಿ.ಲಲಿತಾನಾಯಕ್ ಅವರಿಗೆ ಪ್ರದಾನ ಮಾಡಲಿದ್ದು, ಪ್ರಶಸ್ತಿ ಮೊತ್ತ 1 ಲಕ್ಷ ರೂ. ನೀಡಿ ಗೌರವಿಸಲಾಗುವುದು. ಸಮಾರಂಭವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ-ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಪ್ರಶಸ್ತಿ ವಿಜೇತರ ಕಿರು ಹೊತ್ತಿಗೆ ಬಿಡುಗಡೆ ಮಾಡಲಿದ್ದು, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಕೂಡ ಉಪಸ್ಥಿತರಿರುತ್ತಾರೆ.
ಹೆಚ್ಚುವರಿ ಅನುದಾನಕ್ಕೆ ಮನವಿ:
ಸಂತ ಸೇವಾಲಾಲ್ ಪ್ರಶಸ್ತಿಯನ್ನು ಸಾಹಿತಿ ಬಿ.ಟಿ.ಲಲಿತಾನಾಯಕ್ ಅವರಿಗೆ ಪ್ರದಾನ ಮಾಡಲಾಗುತ್ತದೆ. 10 ಮಂದಿಗೆ ಗೌರವ ಪ್ರಶಸ್ತಿ, 20 ಮಂದಿಗೆ ವಾರ್ಷಿಕ ಪ್ರಶಸ್ತಿ ಹಾಗೂ 9 ಬರಹಾಗಾರರಿಗೆ ಪುಸ್ತಕ ಪಶಸ್ತಿಯ ಬಹುಮಾನ ನೀಡಿ ಗೌರವಿಸಲಾಗುವುದು. ಇದೇ ವೇಳೆ ಅಕಾಡೆಮಿಯ ನೂತನ ಲಾಂಛನವನ್ನು ಬಿಡುಗಡೆ ಮಾಡಲಾಗುತ್ತದೆ. ಅಕಾಡೆಮಿಯಿಂದ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರ್ಕಾರವು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದರೆ ಬಂಜಾರ ಸಮುದಾಯದ ಶ್ರೇಯೋಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಡಾ. ಎ.ಆರ್. ಗೋವಿಂದಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ರಿಜಿಸ್ಟಾರ್ ಡಿ.ಎಂ.ರವಿಕುಮಾರ್ ಹಾಜರಿದ್ದರು.