ಜಿಲ್ಲೆ

ನಿತ್ಯ ನಾವಿನ್ಯದ ದೇವಭಾಷೆ ಸಂಸ್ಕೃತ

ಗೋಕರ್ಣ: ಹೊಸ ಹೊಸ ಶಬ್ದಗಳನ್ನು ಸೃಜಿಸಬಲ್ಲ ಜಗದ ಏಕಮೇವ ಭಾಷಾ ಗೌರವ ಸಂಸ್ಕೃತಕ್ಕೆ ಮಾತ್ರ ಸಲ್ಲುತ್ತದೆ. ಶಬ್ದ ಸೃಷ್ಟಿಯ ತನ್ನ ಬ್ರಹ್ಮತ್ವದಿಂದಾಗಿ ಸಂಸ್ಕೃತ ಇವತ್ತಿಗೂ ನಿತ್ಯ ನಾವಿನ್ಯತೆಯನ್ನು ಪಡೆದ ಪ್ರಾಚೀನ ದೇವಭಾಷೆ ಎಂಬ ಕೀರ್ತಿಗೆ ಭಾಜನವಾಗಿದೆ ಎಂದು ಯಕ್ಷಗಾನ ಸಂಶೋಧಕ ಡಾ. ಜಿ.ಎಲ್.ಹೆಗಡೆ ಅಭಿಪ್ರಾಯಪಟ್ಟರು.

ಇಲ್ಲಿನ ಅಶೋಕೆಯ ಶ್ರೀರಾಮಚಂದ್ರಾಪುರ ಮಠ ಸಭಾಂಗಣದಲ್ಲಿ ರಾಜ್ಯ ಮತ್ತು ಜಿಲ್ಲಾ ಸಂಸ್ಕೃತ ಅಧ್ಯಾಪಕರ ಸಂಘ, ಬೆಂಗಳೂರಿನ ಸಮ್ಯಕ್ ಪ್ರತಿಷ್ಠಾನಂ ಮತ್ತು ವ್ಯೋಮ ಲಿಂಗ್ವೆಸ್ಟಿಕ್ ಫೌಂಡೇಶನ್ ಆಯೋಜಿಸಿದ್ದ ರಾಜ್ಯ ಮಟ್ಟದ ಸಂಸ್ಕೃತ ಪ್ರತಿಭಾ ಪುರಸ್ಕಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಮೇಲೆ ಅವ್ಯಾಹತವಾಗಿ ನಡೆದ ಬೌದ್ಧಿಕ ಮತ್ತು ಭೌತಿಕ ಆಕ್ರಮಣದ ನಡುವೆಯೂ ಸಂಸ್ಕೃತ ಭಾಷೆ ಇವತ್ತಿಗೂ ತನ್ನ ಸದೃಢತೆಯನ್ನು ಸಂರಕ್ಷಿಸಿಕೊಂಡಿರಲು ಅದರಲ್ಲಿ ಅಡಗಿರುವ ಅಪಾರವಾದ ಜ್ಞಾನ ಭಂಡಾರ ಕಾರಣವಾಗಿದೆ. ಇಂತಹ ಅನುಪಮವಾದ ಭಾಷೆಯನ್ನು ಸಹ ರಾಜಕೀಯಗೊಳಿಸಲಾಗಿರುವುದು ವಿಷಾದನೀಯ. ಬದುಕಿಗೆ ಜ್ಞಾನ ದೀವಿಗೆಯಾಗಬಲ್ಲ ಸಂಸ್ಕೃತವನ್ನು ಇಂತಹ ಕಾರ್ಯಕ್ರಮಗಳ ಮುಖೇನ ಜೀವನದ ಜೀವವಾಗಿಸುವ ಮಹಾ ಪ್ರಯತ್ನ ಶ್ಲಾಘನೀಯ ಎಂದರು.

ಸಮ್ಯಕ್ ಪ್ರತಿಷ್ಠಾನದ ಕಾರ್ಯದರ್ಶಿ ವೀರಭದ್ರ ಮಾತನಾಡಿ, ಪೀಠಾಧಿಪತಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರ ನೇತೃತ್ವದ ಶ್ರೀಮಠ ಸಂಸ್ಕೃತ ಭಾಷಾ ಪುನರುತ್ಥಾನದ ಮಹಾಶಕ್ತಿ ಸ್ಥಳವಾಗಿದೆ. ಅಶೋಕೆಯಲ್ಲಿ ಸಂಸ್ಕೃತಿ ಮತ್ತು ಸಂಸ್ಕೃತದ ಸಮನ್ವಯಕ್ಕೆ ಕಾರಣರಾದ ಶ್ರೀಗಳ ಸಾಧನೆ ಅನನ್ಯವಾದುದಾಗಿದೆ ಎಂದರು.

ಜಿಲ್ಲಾ ಪ್ರೌಢ ಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷ ಎಲ್.ಎಂ. ಹೆಗಡೆ ರ್ಕ ಮಾತನಾಡಿ, ಭಾರತೀಯ ಸಂಸ್ಕೃತಿಯ ತಳಪಾಯವಾದ ಸಂಸ್ಕೃತ ವ್ಯಾಪಕವಾಗುವಂತಾಗಲು ಸಂಸ್ಕೃತ ಶಿಕ್ಷಕರ ಸಾಂಘಿಕ ಪ್ರಯತ್ನ ಅತ್ಯಗತ್ಯ. ಈ ನಿಟ್ಟಿನಲ್ಲಿ ಸಂಸ್ಕೃತ ಅಧ್ಯಾಪಕರ ಸಂಘದ ಇಂತಹ ಪುರಸ್ಕಾರ ಸಮಾರಂಭ ಪ್ರೇರಣಾದಾಯಕವಾದುದು ಎಂದರು.

ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಡಳಿತಾಧಿಕಾರಿ ಡಾ. ಪ್ರಸನ್ನಕುಮಾರ ಮಾತನಾಡಿದರು.

ಕಾರ್ಯಕ್ರಮದಲ್ಲಿ 173 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವಿತ್ತು ಸನ್ಮಾನಿಸಲಾಯಿತು. ಜಿಲ್ಲಾ ಸಂಸ್ಕೃತ ಅಧ್ಯಾಪಕರ ಸಂಘದ ಅಧ್ಯಕ್ಷ ಭಾಸ್ಕರ ಜಿ.ಭಟ್ಟ ಸ್ವಾಗತಿಸಿದರು.

ಕಾರ್ಯಕ್ರಮದ ವಿಶೇಷ ಪ್ರಾಯೋಜಕರಾದ ಉದ್ಯಮಿ ಮಂಜುನಾಥ ಭಟ್ಟ ಸುವರ್ಣಗದ್ದೆ ಮತ್ತು ಶಿಕ್ಷಕ ಗಣೇಶ ಭಟ್ಟ ಕೂಜಳ್ಳಿ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಸಂ.ಅ.ಸಂಘದ ಕಾರ್ಯದರ್ಶಿ ಈಶ್ವರ ಭಟ್ಟ ವಂದಿಸಿದರು. ಜಿಲ್ಲೆಯ ಸಂಸ್ಕೃತ ಶಿಕ್ಷಕರು ಮತ್ತು ಶ್ರೀಸಂಸ್ಥಾನದ ಪದಾಧಿಕಾರಿಗಳು ಸಹಕರಿಸಿದರು.