ಜಿಲ್ಲೆ

ಸಂಸ್ಕೃತದಲ್ಲಿರುವ ಸಂಸ್ಕಾರ ಎಲ್ಲರಿಗೂ ತಲುಪಲಿ

ಎ. ಆರ್. ರಘುರಾಮ

ಮೇಲುಕೋಟೆ : ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆಯಲ್ಲಿರುವ ಸಂಸ್ಕಾರಗಳು ಜನಸಾಮಾನ್ಯರಿಗೂ ತಲುಪಬೇಕು ಎಂದು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ) ಕಾರ್ಯದರ್ಶಿ ಮನೀಶ್ ಆರ್.ಜೋಶಿ ಹೇಳಿದರು.
ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌ನಲ್ಲಿ ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿವಿ ಮತ್ತು ಕರ್ನಾಟಕ ಸಂಸ್ಕೃತ ವಿವಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಪವೇದಗಳ ಉಪಯೋಗ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಸಾರಭೂತ ಅಂಶಗಳು ಹಾಗೂ ವೇದ ವೇದಾಂತದ ತಿರುಳು ಸಾಮಾನ್ಯರಿಗೂ ತಿಳಿಯುವ ಮೂಲಕ ಉತ್ಕೃಷ್ಟ ಮೌಲ್ಯಗಳು ಮನೆ ಮನಗಳನ್ನು ತಲುಪಬೇಕು. ವೇದ ವೇದಾಂತಗಳ ಆಶಯ ಅರ್ಥಮಾಡಿಕೊಂಡರೆ ಮೌಲ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ದಿಕ್ಸೂಚಿ ಭಾಷಣ ಮಾಡಿ, ವೇದ ಹಾಗೂ ಉಪವೇದಗಳಾದ ಆಯುರ್ವೇದ, ಧನುರ್ವೇದ, ಗಾಂಧರ್ವ ವೇದ ಮತ್ತು ಅರ್ಥಶಾಸ್ತ್ರದಲ್ಲಿ ಜೀವನದ ಎಲ್ಲ ವಿಚಾರಧಾರೆಗಳೂ ಅಡಗಿವೆ. ವಿಜ್ಞಾನ, ಆರೋಗ್ಯ, ಜೀವನ ಕ್ರಮ ಅಡಕವಾಗಿವೆ. ನಾವು ಅವುಗಳನ್ನು ಅಧ್ಯಯನ ಮಾಡಿ ಬಳಕೆಗೆ ತರುವ ಕಾರ್ಯ ಮಾಡಬೇಕಿದೆ. ಇದಕ್ಕೆ ಜಾತಿ ಮತ ಬೇಧವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತ ವಿವಿ ಕುಲಸಚಿವೆ ಡಾ. ಅಹಲ್ಯಾ ಶರ್ಮ ಮಾತನಾಡಿ ಕರ್ನಾಟಕ ಸಂಸ್ಕೃತ ವಿವಿ ಆಯುರ್ವೇದ, ಯೋಗ, ಸಂಸ್ಕೃತಗಳ ಹಲವು ಪಠ್ಯಗಳನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ಕುಲಸಚಿವ ಎಸ್. ಕುಮಾರ ಹಾಗೂ ಸಂಸ್ಕೃತ ವಿವಿ ಪ್ರಾಥ್ಯಾಪಕರು ಡಾ. ಭಾಸ್ಕರ್ ಭಟ್ ಜೋಶಿ, ಡಾ. ಶೃತಿ, ಡಾ. ತಿಮ್ಮಣ್ಣ, ಶಿವಮೂರ್ತಿ, ಡಾ. ವನರಾಜ ಮತ್ತು ಡಾ. ನಾಗೇಂದ್ರ ಭಾಗವಹಿಸಿದ್ದರು.
ಪ್ರಸ್ತಾವನೆ: ಇದೇ ಸಂದರ್ಭ ಮೇಲುಕೋಟೆಯ ಭಗವದ್ ರಾಮಾನುಜ ಸಂಶೋಧನಾ ಕೇಂದ್ರದ ಉನ್ನತೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ನಂತರ ಯು.ಜಿ.ಸಿ. ಕಾರ್ಯದರ್ಶಿಗಳಾದ ಮನೀಶ್ ಆರ್. ಜೋಶಿಯವರು ಸಂಸ್ಥೆಯ ತಾಳಪತ್ರವಿಭಾಗ, ಗ್ರಂಥಾಲಯ, ಸಂಶೋಧನಾ ವಿಭಾಗಗಳನ್ನು ಪರಿಶೀಲಿಸಿದರು.