ಹುಬ್ಬಳ್ಳಿ: ಸಂಸ್ಕೃತ ಭಾಷೆಯು ಭಾರತೀಯ ಎಲ್ಲ ಭಾಷೆಗಳ ತಾಯಿ. ಆದ್ದರಿಂದ ಸಂಸ್ಕೃತ ಭಾಷೆಯನ್ನು ಎಲ್ಲರೂ ಅಧ್ಯಯನ ಮಾಡಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಸಲಹೆ ನೀಡಿದರು.
ಧಾರವಾಡ ವಿಭಾಗದ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘದ ವತಿಯಿಂದ ನಗರದ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಸ್ಕೃತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತ ಭಾಷೆಯು ಭಾರತದ ಸಂಸ್ಕೃತಿಯ ಪ್ರತೀಕ. ಸಂಸ್ಕೃತವು ಜನಸಾಮಾನ್ಯರ ಭಾಷೆಯಾದಾಗ ಮಾತ್ರ ಭಾರತ ಎಂಬ ಹೆಸರು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಂಸ್ಕೃತ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 98 ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಸ್ವೀಕರಿಸಿದರು.
ಹವ್ಯಕ ಸಂಸ್ಥೆಯ ಕಾರ್ಯದರ್ಶಿ ಸುದರ್ಶನ ಹೆಗಡೆ ಹೇಮಾದ್ರಿ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಕೃತ ವಿಷಯ ಪರಿವೀಕ್ಷಕ ಡಾ.ವಿ.ಡಿ. ಭಟ್, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ, ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ, ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಸತೀಶ ಹೆಗಡೆ, ಕೆ. ಇ. ಬೋರ್ಡಿನ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಿ.ಆರ್. ಭಟ್, ಭಾರತೀಯ ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ವಿ.ಟಿ. ಹೆಗಡೆ, ಹವ್ಯಕ ಸಂಸ್ಥೆಯ ನಿರ್ದೇಶಕರಾದ ಅರುಣಕುಮಾರ, ವೀಣಾ ಹೆಗಡೆ, ಕರ್ನಾಟಕ ರಾಜ್ಯ ಸಂಸ್ಕೃತ ಅಧ್ಯಾಪಕ ಸಂಘದ ಗೌರವ ಅಧ್ಯಕ್ಷ ನಾರಾಯಣ ಭಟ್, ಅಧ್ಯಕ್ಷ ಕೃಷ್ಣ ಭಟ್, ರಾಮಚಂದ್ರ ಭಟ್, ಮಹೇಶ ಭಟ್, ಶ್ರೀಹರ್ಷ ಆಚಾರ್ಯ, ರೇಣುಕಾ ಜೋಶಿ ಇತರರು ಇದ್ದರು.